ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಸಿನಿಮಾ ಬಿಡುಗಡೆಗೆ ಇನ್ನೊಂದೆ ದಿನ ಬಾಕಿ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ತೆರೆ ಹಂಚಿಕೊಂಡಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಇದೇ ಶುಕ್ರವಾರ ತೆರೆಗಪ್ಪಳಿಸಲಿದೆ. ಕಳೆದ ಕೆಲ ದಿನಗಳಿಂದ ಚಿತ್ರತಂಡ ಭರ್ಜರಿ ಪ್ರಚಾರ ಕೈಗೊಂಡಿದೆ.
ಅನಿಮಲ್ ಪ್ರಮೋಶನ್ ಸಲುವಾಗಿ ರಣ್ಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಸಂದೀಪ್ ರೆಡ್ಡಿ ವಂಗಾ ಹಾಗೂ ಬಾಬಿ ಡಿಯೋಲ್ ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿನಲ್ಲಿ ಅನಿಮಲ್ ಪ್ರಚಾರದ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಟ್ರೇಲರ್ನಿಂದಲೇ ಕುತೂಹಲ ಹುಟ್ಟಿಸಿರೋ ಅನಿಮಲ್ ಸಿನಿಮಾವನ್ನು ಕನ್ನಡದ ಖ್ಯಾತ ಕೆ.ವಿ. ಎನ್ ಸಂಸ್ಥೆ ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದೆ.
ಪ್ರಮೋಶನಲ್ ಈವೆಂಟ್ನಲ್ಲಿ ನಟ ರಣ್ಬೀರ್ ಕಪೂರ್ ಮಾತನಾಡಿ, ಇದು ವಿಭಿನ್ನ ಸಿನಿಮಾ. ತಂದೆ - ಮಗನ ಬಾಂಧವ್ಯದ ಜೊತೆ ಜೊತೆಗೆ ಹಿಂಸೆ ಮತ್ತು ಕ್ರೌರ್ಯವನ್ನೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ತೋರಿಸಿದ್ದಾರೆ. ಸೆಂಟಿಮೆಂಟ್ ಮತ್ತು ಕ್ರೌರ್ಯಕ್ಕೆ ಎಷ್ಟು ಪ್ರಾಧಾನ್ಯತೆ ನೀಡಲಾಗಿದೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಹಿರಿಯ ನಟರಾದ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರ ಜೊತೆ ಕೆಲಸ ಮಾಡಿದ್ದು ಒಂದೊಳ್ಳೆ ಅನುಭವ ಕೊಟ್ಟಿದೆ. ಜೊತೆಗೆ ರಶ್ಮಿಕಾ ಮಂದಣ್ಣ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ತಿಳಿಸಿದರು.