'ಅನಿಮಲ್'. ಇದು ಮುಂದಿನ ಬಹುನಿರೀಕ್ಷಿತ ಚಿತ್ರಗಳ ಪೈಕಿ ಒಂದು. ಡಿಸೆಂಬರ್ 1ರಂದು ವಿಶ್ವಾದ್ಯಂತ ತೆರೆಗಪ್ಪಳಿಸಲಿರುವ ಚಿತ್ರದ ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ನವೆಂಬರ್ 27ರಂದು ಹೈದರಾಬಾದ್‌ನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಚಿತ್ರತಂಡದೊಂದಿಗೆ ನಿರ್ದೇಶಕ ಎಸ್.ಎಸ್.ರಾಜಮೌಳಿ, ನಟರಾದ ಪ್ರಭಾಸ್, ಮಹೇಶ್ ಬಾಬು ಸೇರಿದಂತೆ ಸಿನಿಮೋದ್ಯಮದ ಖ್ಯಾತನಾಮರಿದ್ದರು.
ಈ ಸಂದರ್ಭದಲ್ಲಿ ಮಹೇಶ್ ಬಾಬು ಅವರು ರಣ್‌ಬೀರ್ ಕಪೂರ್ ಅವರನ್ನು ಹೊಗಳಿದರು. ರಣ್‌ಬೀರ್ "ಭಾರತದ ಅತ್ಯುತ್ತಮ ನಟ" ಎಂದು ಬಣ್ಣಿಸಿದರು. ನೀಲಿ ಟಿ ಶರ್ಟ್, ಜೀನ್ಸ್‌ನಲ್ಲಿ ಮಹೇಶ್ ಬಾಬು ಕ್ಯಾಶುವಲ್ ಲುಕ್‌ನಲ್ಲಿ ಮಿಂಚಿದರು.
ನಾನು ರಣ್‌ಬೀರ್ ಅವರ ಬಿಗ್ ಫ್ಯಾನ್-ಮಹೇಶ್ ಬಾಬು: ಈ ಹಿಂದೆಯೂ ರಣ್‌ಬೀರ್ ಕಪೂರ್ ಮೇಲಿರುವ ತಮ್ಮ ಅಭಿಮಾನವನ್ನು ಮಹೇಶ್ ಬಾಬು ತಿಳಿಸಿದ್ದರು. ಆದರೆ, ಆ ಸಂದರ್ಭದಲ್ಲಿ ನನ್ನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದೆನಿಸಿತು. ಇದೀಗ ಮತ್ತೆ ಹೇಳುತ್ತಿದ್ದೇನೆ, ನಾನು ರಣ್‌ಬೀರ್ ಅವರ ಬಿಗ್ ಫ್ಯಾನ್ ಎಂದರು. ರಣ್ಬೀರ್ಗೆ ತಮ್ಮ ಬೆಂಬಲ ಸೂಚಿಸಿದ ಮಹೇಶ್ ಬಾಬು, ದೇಶದಲ್ಲೇ ಅತ್ಯುತ್ತಮ ನಟ ಎಂದು ಪುನರುಚ್ಚರಿಸಿದರು. ಮಹೇಶ್ ಹಿಂದೆ ನಿಂತಿದ್ದ ರಣ್‌ಬೀರ್ ಮೊಗದಲ್ಲಿ ತೇಜಸ್ಸು ಎದ್ದು ಕಾಣುತ್ತಿತ್ತು.
ರಣ್‌ಬೀರ್ ಕಪೂರ್ ಮಾತನಾಡುವಾಗ, ಸೌತ್ ಸೂಪರ್ ಸ್ಟಾರ್ನ ಒಕ್ಕಡು ಸಿನಿಮಾ ವೀಕ್ಷಿಸಿದ ನಂತರ ಅವರಿಗೆ ಮೆಸೇಜ್ ಮಾಡಿದ್ದ ಕ್ಷಣವನ್ನು ನೆನಪಿಸಿಕೊಂಡರು. ಬಳಿಕ, ಮಹೇಶ್ ಅವರ ಬೆಂಬಲ ಮತ್ತು ಗುಣಗಾನದ ಮಾತುಗಳಿಗೆ ಬ್ರಹ್ಮಾಸ್ತ್ರ ಸ್ಟಾರ್ ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ವೇದಿಕೆಯಲ್ಲಿ "ಜೈ ಬಾಬು, ಜೈ ಬಾಬು" ಎಂದು ಹೇಳುವ ಮೂಲಕ ಮಹೇಶ್ ಬಾಬು ಮೇಲಿನ ತಮ್ಮ ಅಭಿಮಾನವನ್ನು ರಣ್‌ಬೀರ್ ವ್ಯಕ್ತಪಡಿಸಿದರು.