ಬಾಲಿವುಡ್ ನಟ ರಣ್ಬೀರ್ ಕಪೂರ್ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಕಂಡ ಖುಷಿಯಲ್ಲಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ ಈಗಾಗಲೇ ಈ ವರ್ಷದಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ನಾಲ್ಕನೇ ಸಿನಿಮಾವಾಗಿ ಹೊರಹೊಮ್ಮಿದೆ. ಕೇವಲ ಆರು ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂ. ಮತ್ತು ಜಾಗತಿಕವಾಗಿ 500 ಕೋಟಿ ರೂಪಾಯಿ ಗಡಿ ದಾಟಿ ದಾಖಲೆ ಬರೆದಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಅನಿಮಲ್ ತೆರೆಕಂಡ ಒಂದು ವಾರದೊಳಗೆ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಸುಮಾರು 312.96 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ಸು ಕಂಡಿದೆ. ಆರನೇ ದಿನ (ಬುಧವಾರ) ಸಿನಿಮಾ 30 ಕೋಟಿ ರೂಪಾಯಿ ಗಳಿಸಿದೆ. ಅನಿಮಲ್ ತೆರೆಕಂಡ ಮೊದಲ ದಿನ 63.8 ಕೋಟಿ ರೂ. ಗಳೊಂದಿಗೆ ತನ್ನ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತ್ತು. ಮೊದಲ ಭಾನುವಾರ 71.46 ಕೋಟಿ ರೂ. ಗಳಿಸಿತ್ತು. ಮೊದಲ ಸೋಮವಾರ 43.96 ಕೋಟಿ ರೂ. ಗಳಿಸಿತು. ಮಂಗಳವಾರ 37.47 ಕೋಟಿ ರೂ.ಗಳ ವ್ಯವಹಾರ ನಡೆಸಿತ್ತು. ಬುಧವಾರದಂದು ಚಿತ್ರಮಂದಿರಗಳಲ್ಲಿ ಒಟ್ಟಾರೆ ಆಕ್ಯುಪೆನ್ಸಿ ಶೇ.34.88ರಷ್ಟಿದ್ದು, 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಜವಾನ್, ಪಠಾಣ್ ಮತ್ತು ಗದರ್ 2 ಸಿನಿಮಾಗಳ ನಂತರ ಅನಿಮಲ್ ಸ್ಥಾನ ಪಡೆದುಕೊಂಡಿದೆ. 2023ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ನಾಲ್ಕನೇ ಬಾಲಿವುಡ್ ಸಿನಿಮಾ 'ಅನಿಮಲ್'. ಶಾರುಖ್ ಖಾನ್ ಅಭಿನಯದ ಜವಾನ್ ಭಾರತದಲ್ಲಿ 643.87 ಕೋಟಿ ರೂಪಾಯಿ ಗಳಿಸಿತ್ತು. ಪಠಾಣ್ 543.05 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ನಂತರ ಸನ್ನಿ ಡಿಯೋಲ್ ಅವರ ಗದರ್ 2 ಚಿತ್ರ 525.45 ಕೋಟಿ ರೂ.ನ ವ್ಯವಹಾರ ನಡೆಸಿತ್ತು. ಮತ್ತೊಂದೆಡೆ ಸಲ್ಮಾನ್ ಖಾನ್ ಅವರ ಟೈಗರ್ 3ರ ಒಟ್ಟು ಕಲೆಕ್ಷನ್ 284.05 ಕೋಟಿ ರೂ. ಆಗಿದ್ದು, ಈ ದಾಖಲೆಯನ್ನೂ ಅನಿಮಲ್ ಮೀರಿಸಿದೆ. ಡಿಸೆಂಬರ್ 21 ರಂದು ಶಾರುಖ್ ಖಾನ್ ಅವರ ಡಂಕಿ ಸಿನಿಮಾ ತೆರೆಕಾಣಲಿದ್ದು, ಅಲ್ಲಿವರೆಗೂ ಅನಿಮಲ್ ಪ್ರದರ್ಶನ ಕಾಣುವ ಭರವಸೆ ಇದೆ.