ನಾಗಾಂವ್ (ಅಸ್ಸೋಂ):ಬಾಲಿವುಡ್ ಬಹುಬೇಡಿಕೆ ನಟರಲ್ಲೊಬ್ಬರಾದ ಅನಿಲ್ ಕಪೂರ್ ಬುಧವಾರ ಸಂಜೆ ಅಸ್ಸೋಂಗೆ ಆಗಮಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿ ಸಖತ್ ಸದ್ದು ಮಾಡುತ್ತಿರುವ 'ಅನಿಮಲ್' ಮೂಲಕ ಗಮನ ಸೆಳೆದಿರುವ ಅನುಭವಿ ನಟ ಅಸ್ಸೋಂನ ನಾಗಾಂವ್ ಜಿಲ್ಲೆಯಲ್ಲಿರುವ ರೆಫ್ರೆಸ್ಕೋ ರೆಸಾರ್ಟ್‌ಗೆ (Refresco Resort) ಭೇಟಿ ಕೊಟ್ಟಿದ್ದಾರೆ.
ಅಭಿಮಾನಿಗಳಿಂದ ಮಿಸ್ಟರ್ ಇಂಡಿಯಾ ಎಂದು ಕರೆಸಿಕೊಳ್ಳುವ ನಟ ರೆಸಾರ್ಟ್‌ನಲ್ಲಿ ಅಸ್ಸಾಮಿ ತಿನಿಸುಗಳನ್ನು ಸವಿದು, ಸ್ಥಳೀಯ ಚಿತ್ರಮಂದಿರಕ್ಕೆ ಭೇಟಿ ನೀಡಿದರು. ರೆಸಾರ್ಟ್ ಸಿಬ್ಬಂದಿ ಅಸ್ಸಾಂನ ಖ್ಯಾತ ಹೂವಿನ ಗಮೋಸಾ ನೀಡಿ ಬಾಲವುಡ್ ಖ್ಯಾತ ನಟನನ್ನು ವಿಶೇಷವಾಗಿ ಸ್ವಾಗತಿಸಿದರು.
ಜನಪ್ರಿಯ ನಟ ಅನಿಲ್ ಕಪೂರ್ ವೈಯಕ್ತಿಕ ಭೇಟಿ ಹಿನ್ನೆಲೆ ನಾಗಾಂವ್‌ಗೆ ಆಗಮಿಸಿದ್ದಾರೆ. ಇದೊಂದು ಸೀಕ್ರೆಟ್ ವಿಸಿಟ್ ಆಗಿದೆ. ಅಲ್ಲಿಂದ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ತೆರಳಿದರು. ಅಸ್ಸೋಂನ ಜನರು ಅನಿಮಲ್ ಸಿನಿಮಾ ನೋಡಿ ಆನಂದಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಬಯಸಿದ್ದರು. ಅನಿಲ್ ಕಪೂರ್ ಅವರನ್ನು ಕಂಡ ರೆಸಾರ್ಟ್ ಸಿಬ್ಬಂದಿ ಬಹಳಾನೇ ಸಂತೋಷಪಟ್ಟರು.
ರೆಸಾರ್ಟ್ ಸಿಬ್ಬಂದಿ ತಮ್ಮ ಮೆಚ್ಚಿನ ನಟನೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಅನಿಲ್ ಕಪೂರ್ ಆಗಮಿಸಿರುವ ಸುದ್ದಿ ತಿಳಿದ ಅಭಿಮಾನಿಗಳು ರೆಸಾರ್ಟ್ ಬಳಿ ಜಮಾಯಿಸಿದ್ದರು. ತಮ್ಮ ಮೆಚ್ಚಿನ ನಟನನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದರಿಂದ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದರು.