'ವಾಸು ನಾನು ಕಮರ್ಷಿಯಲ್' ಹಾಗೂ 'ರಾಮಾರ್ಜುನ' ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರುವ ನಟ ಅನೀಶ್ ತೇಜೇಶ್ವರ್. ಸದ್ಯ 'ಮಾಯಾನಗರಿ' ಎಂಬ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರೀಕರಣ ಮುಗಿಸಿರುವ 'ಮಾಯಾನಗರಿ ಚಿತ್ರ ಬಿಡುಗಡೆ ಸಜ್ಜಾಗಿದೆ. ಇದೀಗ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಶಂಕರ ಆರಾಧ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಮಾಯಾನಗರಿ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಬೆಂಗಳೂರಿನ ಕುರುಬರಹಳ್ಳಿ ಸರ್ಕಲ್ನಲ್ಲಿರುವ ಅಣ್ಣಾವ್ರ ಪುತ್ಥಳಿ ಮುಂದೆ ಟ್ರೇಲರ್ ಅನಾವರಣಗೊಂಡಿದೆ. ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ಬರುವ ಯುವಕನ ಪಾತ್ರದಲ್ಲಿ ನಟ ಅನೀಶ್ ತೇಜೇಶ್ವರ್ ಅವರು ಕಾಣಿಸಿಕೊಂಡಿದ್ದು, ಶ್ರಾವ್ಯ ರಾವ್ ನಾಯಕಿಯಾಗಿ ನಟಿಸಿದ್ದಾರೆ.
ಮಾಯಾನಗರಿ ತಂಡ; ಅನೀಶ್ ಜೋಡಿಯಾಗಿ ಶ್ರಾವ್ಯ ರಾವ್ ಹಾಗೂ ತೇಜು ನಟಿಸಿದ್ದಾರೆ. ಹಿರಿಯ ನಟ, ನಿರ್ದೇಶಕ ದ್ವಾರಕೀಶ್, ಶರತ್ ಲೋಹಿತಾಶ್ವ, ಅವಿನಾಶ್, ಸುಚೇಂದ್ರ ಪ್ರಸಾದ್, ಎಡಕಲ್ಲು ಗುಡ್ಡದ ಚಂದ್ರಶೇಖರ್, ಚಿಕ್ಕಣ್ಣ ಹಾಗೂ ನಿಹಾರಿಕಾ ಸೇರಿದಂತೆ ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ:ದೀಪಾವಳಿ ಸಂಭ್ರಮ: ಮಾಲಾಶ್ರೀ ಜೊತೆ ಮಗಳು ಆರಾಧನಾ ಫೋಟೋಶೂಟ್
ಹಲವು ವಿಶೇಷತೆಗಳುಳ್ಳ ಸಿನಿಮಾ: ಈ ಚಿತ್ರದಲ್ಲಿ ಹಲವಾರು ವಿಶೇಷತೆಗಳಿದ್ದು, ಅದನ್ನು ಹಂತ ಹಂತವಾಗಿ ಪರಿಚಯಿಸುವ ಆಲೋಚನೆ ನಿರ್ದೇಶಕ ಶಂಕರ್ ಆರಾಧ್ಯ ಅವರದ್ದು. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡಾ ವಹಿಸಿಕೊಂಡಿದ್ದಾರೆ. ಸ್ಯಾಂಡಲ್ವುಡ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಶ್ವೇತಾ ಶಂಕರ್ ಸಹ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.
ತಾಂತ್ರಿಕವಾಗಿಯೂ ಈ ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಕ್ರಮ್ ಮೋರ್ ಈ ಚಿತ್ರದಲ್ಲಿ ವಿಭಿನ್ನವಾಗಿ ಫೈಟ್ ಕಂಪೋಸ್ ಮಾಡಿದ್ದಾರೆ. ಮದನ್ - ಹರಿಣಿ ಹಾಗೂ ಮುರಳಿ ನೃತ್ಯ ನಿರ್ದೇಶನ, ವಿಜಯ್ ಎಂ ಕುಮಾರ್ ಸಂಕಲನ, ಶ್ರೀನಿವಾಸ್ ಕ್ಯಾಮರಾ ಕೈಚಳಕ ಈ ಚಿತ್ರಕ್ಕಿದೆ. ಇದೊಂದು ಬಿಗ್ ಬಜೆಟ್ನಲ್ಲಿ ನಿರ್ಮಾಣವಾದ ಥ್ರಿಲ್ಲರ್ ಚಿತ್ರವಾಗಿದ್ದು, ಮೂರು ಅಥವಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಬಗೆಯ ಹಲವು ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಕೆಲ ಸಿನಿಮಾಗಳು ಭಾರತದಾದ್ಯಂತ ಸದ್ದು ಮಾಡುವಲ್ಲಿ ಯಶ ಕಂಡಿವೆ. ಅದ್ಧೂರಿ ಮೇಕಿಂಗೂ ಹೆಚ್ಚಾಗಿ ಕಂಟೆಂಟ್ಗೆ ಸಿನಿಪ್ರಿಯರು ಆದ್ಯತೆ ನೀಡುತ್ತಿದ್ದಾರೆ. ಕಂಟೆಂಟ್ ಮೇಲೆ ಸಿನಿಮಾ ಯಶಸ್ಸು ನಿರ್ಧಾರಗೊಳ್ಳುತ್ತಿದೆ. ಅದರಂತೆ, 'ಮಾಯಾನಗರಿ'ಗೆ ಪ್ರೇಕ್ಷಕ ಪ್ರಭುಗಳು ಎಷ್ಟು ಮಾರ್ಕ್ಸ್ ಕೊಡ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ:'ಸಿಲ ನೋಡಿಗಳಿಲ್' ತಮಿಳು ಚಿತ್ರಕ್ಕೆ ಪ್ರೊಡ್ಯೂಸರ್ ಆದ ನಟಿ ಶರ್ಮಿಳಾ ಮಾಂಡ್ರೆ