ಮೀನಾ ಲಾಂಗ್‌ಜಮ್ ಅವರ ಮಣಿಪುರಿ ಚಿತ್ರ 'ಆ್ಯಂಡ್ರೋ ಡ್ರೀಮ್ಸ್' ಮುಂಬೈನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಈ ಸಾಕ್ಷ್ಯಚಿತ್ರವು, ಮಣಿಪುರದ ಪೂರ್ವ ಇಂಫಾಲ್ ಜಿಲ್ಲೆಯ ಆ್ಯಂಡ್ರೋ ಎಂಬ ಹಳ್ಳಿ ಹುಡುಗಿಯರ ಫುಟ್ಬಾಲ್ ಕ್ಲಬ್‌ನ ಕಥೆಯನ್ನು ಒಳಗೊಂಡಿದೆ.
ಮಾಸ್ ಕಮ್ಯುನಿಕೇಶನ್ನಲ್ಲಿ ಡಾಕ್ಟರೇಟ್ ಸ್ವೀಕರಿಸಿರುವ ಮೀನಾ ಲಾಂಗ್‌ಜಮ್ (Meena Longjam) ಅವರು ಭಾನುವಾರ ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿಯನ್ನು ಮಣಿಪುರಿ ಸಿನಿಮಾದ ಮತ್ತೊಂದು ಹೈಲೈಟ್ ಎಂದು ಬಣ್ಣಿಸಿದ ಮಣಿಪುರ ಸ್ಟೇಟ್ ಫಿಲ್ಮ್ ಡೆವಲಪ್‌ಮೆಂಟ್ ಸೊಸೈಟಿ (MSFDS)ಯ ಕಾರ್ಯದರ್ಶಿ ಸುಂಜು ಬಚಸ್ಪತಿಮಾಯುಮ್ (Sunju Bachaspatimayum) ಅವರು 'ಆ್ಯಂಡ್ರೋ ಡ್ರೀಮ್ಸ್' ತಂಡವನ್ನು ಅಭಿನಂದಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕಿ ಮೀನಾ ಲಾಂಗ್‌ಜಮ್ ಮಾತನಾಡಿ, 'ಆಂಡ್ರೋ ಡ್ರೀಮ್ಸ್' ಒಂದು ಹಳ್ಳಿಯಲ್ಲಿ ನಡೆಯುವ ಕಥೆ. ಮಣಿಪುರದ ಆ್ಯಂಡ್ರೋ ಎಂಬ ಹಳ್ಳಿಯಲ್ಲಿ ಆರ್ಥಿಕ ಸವಾಲುಗಳು, ಪಿತೃಪ್ರಧಾನ ವ್ಯವಸ್ಥೆ, ಸಂಪ್ರದಾಯವಾದದ ವಿರುದ್ಧ ಹೋರಾಡುವ ವೃದ್ಧೆ ಲಿಬಿ ಮತ್ತು ಹುಡುಗಿಯರ ಫುಟ್ ಬಾಲ್ ಕ್ಲಬ್‌ನ ಕಥೆಯನ್ನು ಈ ಪ್ರಾಜೆಕ್ಟ್ ಒಳಗೊಂಡಿದೆ. ಮಣಿಪುರ ಸಂಸ್ಕೃತಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಹಾಗೂ ಸಾಂಸ್ಕೃತಿಕ ಅಧ್ಯಯನ ವಿಭಾಗದ ಮುಖ್ಯಸ್ಥೆ ಆಗಿರುವ ಮೀನಾ ಲಾಂಗ್‌ಜಮ್, ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇವರಲ್ಲದೇ, ಇಬ್ಬರು ಹೆಸರಾಂತ ಮಣಿಪುರಿ ನಿರ್ದೇಶಕರಾದ ಮಾಯಾಂಗಲಂಬಮ್ ರೋಮಿ ಮೈತೆಯ್ ಮತ್ತು ಸೈಖೋಮ್ ರತನ್ ಅವರು ತಮ್ಮ 'ಇಖೋಗಿ ಯಾಮ್' ಮತ್ತು 'ಬಿಯಾಂಡ್ ಬ್ಲಾಸ್ಟ್' ಚಿತ್ರಗಳಿಗಾಗಿ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ.