ಕಿರುತೆರೆ ಕಲಾವಿದರು ಬಿಗ್ ಸ್ಕ್ರೀನ್ಗೆ ಎಂಟ್ರಿ ಕೊಡೋದು ಹೊಸ ವಿಚಾರವಲ್ಲ. ನಟ ಅರ್ಜುನ್ ಯೋಗಿ ಈಗಾಗಲೇ ಕಿರುತೆರೆಯಲ್ಲಿ ಗಮನ ಸೆಳೆದವರು. ಕೆಲವು ವರ್ಷಗಳ ಕಾಲ ಕಿರುತೆರೆಯಲ್ಲಿ ಅಭಿನಯಿಸಿ, ಉತ್ತಮ ನಟನೆಯ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಬೆಳ್ಳಿತೆರೆಯಲ್ಲೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಅಭಿನಯ ಕಲೆ ಪ್ರದರ್ಶಿಸಿದ್ದಾರೆ. ಧಾರಾವಾಹಿ ಅಷ್ಟೇ ಅಲ್ಲದೇ ರಿಯಾಲಿಟಿ ಶೋಗಳಲ್ಲಿಯೂ ಗುರುತಿಸಿಕೊಂಡವರು. ಇದೀಗ ಬೆಳ್ಳಿ ತೆರೆಯಲ್ಲಿ ಮಿಂಚಲು ಅಣಿಯಾಗಿದ್ದಾರೆ.
ಅರ್ಜುನ್ ಯೋಗಿ 'ಅನಾವರಣ' ಶೀರ್ಷಿಕೆಯ ಚಿತ್ರದ ಮೂಲಕ ಗಮನ ಸೆಳೆಯುತ್ತಿದ್ದು, ಸಿನಿಮಾದ ಎರಡನೇ ಹಾಡು ಇತ್ತೀಚೆಗೆ ರಿಲೀಸ್ ಆಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ 'ಏನಾಗಿದೆ' ಎಂಬ ಪ್ರೇಮಗೀತೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ 'ರೀ ದೇವರೇ' ಎಂಬ ಮತ್ತೊಂದು ಗಾನಬಜಾನವನ್ನು ನೀವು ನೋಡಬಹುದು. ಗಂಡ ಹೆಂಡತಿ ನಡುವಿನ ಮೆಲೋಡಿ ಮಸ್ತಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಹರೀಶ್ ಕುಮಾರ್ ಬಿ.ಕೆ. ಹಾಗೂ ಮೇಘನಾ ಕುಲಕರ್ಣಿ ಜೋಶಿ ಕಂಠದಾನ ಮಾಡಿದ್ದಾರೆ. ಅರ್ಜುನ್ ಯೋಗಿ ಹಾಗೂ ಸಾರಿಕಾ ರಾವ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ನಾಯಕಿಯಾಗಿ ಸಾರಿಕಾ ರಾವ್ ನಟಿಸಿದ್ದಾರೆ. ಇನ್ನುಳಿದಂತೆ ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ, ಯುಕ್ತಾ, ಧರಣಿ ಕುಮಾರ್, ಸಿದ್ದಿ ವಿನಾಯಕ, ಗಿರೀಶ್ ಯು.ಬಿ, ಶಿವರಾಜ್, ರಂಗೋಲಿ ವಿಜಿ, ಬೇಬಿ ದೃತಿ ಶುತ್ವ ಮತ್ತು ಅಭಿ ತಾರಾಬಳಗದಲ್ಲಿದ್ದಾರೆ.