ಟಾಲಿವುಡ್ ನಟ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿದ್ದಾರೆ. ಇದೀಗ ಅವರ ಸಹೋದರ ಆನಂದ್ ದೇವರಕೊಂಡ ಕೂಡ ಅಣ್ಣನ ಯಶಸ್ಸಿನ ಹಾದಿಯಲ್ಲೇ ಹೆಜ್ಜೆ ಇಡಲು ಮುಂದಾಗಿದ್ದಾರೆ. ಆನಂದ್ ನಟಿಸಿರುವ 'ಬೇಬಿ' ಸಿನಿಮಾ ಇಂದು ಬಿಡುಗಡೆಯಾಗಿದೆ. ಈಗಾಗಲೇ ಹಾಡುಗಳು ಮತ್ತು ಪ್ರಚಾರದ ಮೂಲಕವೇ ಗಮನ ಸೆಳೆದಿದ್ದ ಈ ಚಿತ್ರ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಸಿನಿಮಾದಲ್ಲಿ ಆನಂದ್ ದೇವರಕೊಂಡ ಜೊತೆಗೆ ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಕಲರ್ ಫೋಟೋ’ ಮುಂತಾದ ಸಿನಿಮಾಗಳಿಗೆ ಕಥೆ ಬರೆದಿರುವ ಸಾಯಿ ರಾಜೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಟೀಸರ್ ಮತ್ತು ಟ್ರೇಲರ್ಗಳು ಈಗಾಗಲೇ ಯುವಜನತೆಗೆ ಇಷ್ಟವಾಗುವಂತೆ ಕಟ್ಟಿಕೊಡಲಾಗಿದ್ದು, ಸಿನಿಮಾ ಬಗ್ಗೆಯೂ ಜನರು ಉತ್ತಮ ನಿರೀಕ್ಷೆ ಹೊಂದಿದ್ದಾರೆ. ಹಾಗಿದ್ದರೆ ಆ ನಿರೀಕ್ಷೆಗಳನ್ನು 'ಬೇಬಿ' ಪೂರೈಸಿದೆಯೇ? ಎಂಬುದರ ಕುರಿತ ಮಾಹಿತಿ ಹೀಗಿದೆ...
ಚಿತ್ರಕಥೆ:ವೈಶು ಅಲಿಯಾಸ್ ವೈಷ್ಣವಿ (ವೈಷ್ಣವಿ ಚೈತನ್ಯ) ಸ್ಲಂ ಏರಿಯಾದಲ್ಲಿ ಬೆಳೆದ ಹುಡುಗಿ. ಚಿಕ್ಕಂದಿನಿಂದಲೂ ತನ್ನ ಎದುರಿಗಿರುವ ಆನಂದ್ (ಆನಂದ್ ದೇವರಕೊಂಡ)ನನ್ನು ಪ್ರೀತಿಸುತ್ತಾಳೆ. ಇವರಿಬ್ಬರ ಪ್ರೀತಿ ಶಾಲಾ ದಿನಗಳಿಂದಲೇ ಶುರುವಾಗಿ ಒಂದು ಹಂತಕ್ಕೆ ತಲುಪುತ್ತದೆ. ಆದರೆ ಹತ್ತನೇ ತರಗತಿಯಲ್ಲಿ ಆನಂದ್ ಫೇಲ್ ಆದ ಕಾರಣ ಆಟೋ ಚಾಲಕನಾಗಿ ಕೆಲಸ ಮಾಡಲು ಶುರು ಮಾಡುತ್ತಾನೆ. ವೈಷ್ಟವಿ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಸೇರುತ್ತಾಳೆ.
ಅಲ್ಲಿಯ ಹೊಸ ಪರಿಚಯಗಳು ಅವಳ ಆಲೋಚನಾ ವಿಧಾನವನ್ನು ಬದಲಾಯಿಸಲು ಪ್ರಾರಂಭಿಸುತ್ತವೆ. ಹೀಗೆ ವೈಶು ತನ್ನ ಸಹಪಾಠಿ ವಿರಾಜ್ (ವಿರಾಜ್ ಅಶ್ವಿನ್)ಗೆ ಹತ್ತಿರವಾಗುತ್ತಾಳೆ. ಗೆಳೆತನದ ಹೆಸರಲ್ಲಿ ಶುರುವಾದ ಸಂಬಂಧ ಪ್ರೇಮಕ್ಕೆ ತಿರುಗಿ ಅಡ್ಡ ದಾರಿ ಹಿಡಿಯುತ್ತದೆ. ಅನಿರೀಕ್ಷಿತ ಸಂದರ್ಭಗಳಿಂದ ವೈಷ್ಣವಿ ವಿರಾಜ್‌ಗೆ ದೈಹಿಕವಾಗಿ ಹತ್ತಿರವಾಗುತ್ತಾಳೆ. ಅದರ ನಂತರ ಏನಾಗುತ್ತದೆ? ಸತ್ಯ ತಿಳಿದಾಗ ಆನಂದ್ ಪ್ರತಿಕ್ರಿಯೆ ಏನು? ಎಂಬುದು ಉಳಿದ ಕಥೆ.