ಜುಲೈ 14 ರಂದು ತೆರೆಕಂಡ 'ಬೇಬಿ' ಸಿನಿಮಾ ಎಲ್ಲರ ನಿರೀಕ್ಷೆಯನ್ನೂ ಮೀರಿಸಿದ್ದು, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಟಾಲಿವುಡ್ ನಟ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಅಭಿನಯದ ಈ ಚಿತ್ರ ಸೂಪರ್ ಹಿಟ್ ಆಗಿದೆ. ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ನಟನೆಗೆ ಪ್ರೇಕ್ಷಕರು ತಲೆದೂಗಿದ್ದಾರೆ. 'ಕಲರ್ ಫೋಟೋ' ಮುಂತಾದ ಸಿನಿಮಾಗಳಿಗೆ ಕಥೆ ಬರೆದಿರುವ ಸಾಯಿ ರಾಜೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
'ಬೇಬಿ' ರಿಲೀಸ್ ಆಗಿನಿಂದಲೂ ಕಂಟೆಂಟ್ ಮಾತ್ರವಲ್ಲದೇ ಕಲೆಕ್ಷನ್ ಸದ್ದು ಮಾಡುತ್ತ ಮುನ್ನುಗ್ಗುತ್ತಿದೆ. ಥಿಯೇಟರ್ಗಳೂ ಹೌಸ್ ಫುಲ್ ಆಗಿವೆ. ಬಿಡುಗಡೆಗೂ ಮುನ್ನವೇ ಹಾಡುಗಳು ಮತ್ತು ಪ್ರಚಾರದ ಮೂಲಕವೇ ಈ ಚಿತ್ರ ಗಮನ ಸೆಳೆದಿತ್ತು. ಟೀಸರ್ ಮತ್ತು ಟ್ರೇಲರ್ಗಳು ಕೂಡ ಯುವ ಜನತೆಗೆ ಇಷ್ಟವಾಗುವಂತೆ ಕಟ್ಟಿಕೊಡಲಾಗಿತ್ತು. ಸಿನಿ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದೀಗ ಹೊಸ ದಾಖಲೆ ಬರೆಯುವ ಮೂಲಕ ಮತ್ತೊಂದು ಮೈಲಿಗಲ್ಲು ದಾಟಿದೆ.
60.3 ಕೋಟಿ ರೂಪಾಯಿ ಕಲೆಕ್ಷನ್..ಈ ಚಿತ್ರ ಬಿಡುಗಡೆಯಾದ ಮೊದಲ ದಿನ (ಜುಲೈ 14) 7.1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ 7.2 ಕೋಟಿ ರೂಪಾಯಿ ಗಳಿಸಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವುದರ ಜೊತೆಗೆ ಒಂಬತ್ತು ದಿನಗಳಲ್ಲಿ ವಿಶ್ವದಾದ್ಯಂತ 60.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ವಿಚಾರವನ್ನು ನಿರ್ದೇಶಕ ಸಾಯಿ ರಾಜೇಶ್ ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ರಜನಿಕಾಂತ್ 'ಜೈಲರ್' ಆಡಿಯೋ ಲಾಂಚ್: ತಲೈವನ ಗ್ರ್ಯಾಂಡ್ ಈವೆಂಟ್ಗೆ ನೀವೂ ಹೋಗಬೇಕೇ? ಡೀಟೆಲ್ಸ್ ಇಲ್ಲಿದೆ