ಜನಪ್ರಿಯ ತೆಲುಗು ನಟ ಹಾಗು ನಟ ಮಹೇಶ್ ಬಾಬು ಅವರ ತಂದೆ ಕೃಷ್ಣ (79) ಅನಾರೋಗ್ಯ ಹಿನ್ನೆಲೆ ಇತ್ತೀಚೆಗೆ ನಿಧನರಾದರು. ಹೃದಯಾಘಾತ ಹಿನ್ನೆಲೆ ಕುಟುಂಬ ಸದಸ್ಯರು ಹೈದರಾಬಾದ್‌ನ ಗಚ್ಚಿಬೌಲಿಯ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದರು. ಇದು ಪುತ್ರ ಮಹೇಶ್ ಬಾಬು ಸೇರಿದಂತೆ ಅಭಿಮಾನಿಗಳ ದುಃಖಕ್ಕೆ ಕಾರಣವಾಗಿತ್ತು. ಇದೀಗ ನಟ ಮಹೇಶ್ ಬಾಬು ತಮ್ಮ ತಂದೆಯನ್ನು ನೆನೆದು ಭಾವನಾತ್ಮಕ ಪತ್ರ ಬರೆದಿದ್ದಾರೆ.
"ನಿಮ್ಮ ಬದುಕು ಅಮೋಘವಾಗಿತ್ತು. ಪ್ರಸ್ತುತ ನೀವಿಲ್ಲ, ಆದರೂ ನೀವಿದ್ದೀರ. ಇದೆಲ್ಲ ನಿಮ್ಮ ಹಿರಿಮೆ. ಕೊನೆಯವರೆಗೂ ಧೈರ್ಯವಾಗಿ ಜೀವನ ನಡೆಸಿದಿರಿ. ಶೌರ್ಯವೇ ನಿಮ್ಮ ಸ್ವಭಾವ. ನೀವು ನನ್ನ ಸ್ಪೂರ್ತಿ, ಧೈರ್ಯ. ನಾನು ಮೊದಲಿಗಿಂತ ಈಗ ಬಲವಾಗಿದ್ದೇನೆ ಅನಿಸುತ್ತಿದೆ. ನನಗೆ ಈಗ ಭಯವಿಲ್ಲ. ನೀವು ನನ್ನೊಂದಿಗೆ ಸದಾ ಇರುತ್ತೀರ. ನಿಮ್ಮ ಆಶೀರ್ವಾದ, ಪ್ರೀತಿ ಸದಾ ನನ್ನೊಂದಿಗೆ ಇರುತ್ತದೆ. ನಿಮ್ಮ ಪರಂಪರೆಯನ್ನು ಮುಂದುವರಿಸುತ್ತೇನೆ. ಲವ್ ಯು ಅಪ್ಪ" ಎಂದು ಮಹೇಶ್ ಬಾಬು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ..
ಸಹೋದರ ರಮೇಶ್ ಬಾಬು, ತಾಯಿ ಇಂದಿರಾ ಮತ್ತು ತಂದೆ ಕೃಷ್ಣ ಅವರ ಸಾವು ಒಂದರ ಹಿಂದೆ ಒಂದರಂತೆ ಸಂಭವಿಸಿದ್ದು, ಮಹೇಶ್ ಮಾನಸಿಕವಾಗಿ ಏರಿಳಿತಗಳನ್ನು ಎದುರಿಸಿದರು. ಐದೂವರೆ ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಕೃಷ್ಣ ನವೆಂಬರ್ 15 ರಂದು ಕೊನೆಯುಸಿರೆಳೆದರು.