ಸಿನಿಮಾ, ಧಾರಾವಾಹಿಗಳಂದ್ರೇನೆ ಹಾಗೆ. ಅದರಲ್ಲಿ ಬರುವ ಪಾತ್ರಗಳು, ಕಥೆ, ಚಿತ್ರಣವನ್ನು ಅದೆಷ್ಟೋ ಪ್ರೇಕ್ಷಕರು ತಮ್ಮದಾಗಿಸಿಕೊಳ್ಳುತ್ತಾರೆ. ಕೆಲ ಕಲಾವಿದರ ನಟನೆ ಪ್ರೇಕ್ಷಕರ ಮನಮುಟ್ಟುತ್ತದೆ. ಇದೀಗ ನಿನ್ನೆ ಸಂಜೆ ಪ್ರಸಾರವಾದ ಸೀರಿಯಲ್ ಒಂದರ ಸೀನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ನಟಿಯ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹೆಣ್ಮಕ್ಕಳ ಮೂಕವೇದನೆಗೆ ದನಿಯಾಗಿರುವ 'ಅಮೃತಧಾರೆ' ತಂಡಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ.
ನಿನ್ನೆಯ ಎಪಿಸೋಡ್ನಲ್ಲಿ ಲೇಟ್ ಆಗಿ ಮದುವೆ ಆಗುವವರ ಕಷ್ಟಗಳ ಕುರಿತಾಗಿತ್ತು. ಈ ಕುರಿತು ನಟಿ ಛಾಯಾಸಿಂಗ್ ಮಾತನಾಡುತ್ತಾ, ''ಓರ್ವ ಹೆಣ್ಣು ಲೇಟಾಗಿ ಮದುವೆ ಆಗಬಹುದು, ಆಗದೇ ಇರಬಹುದು. ಕ್ಷಮಿಸಲು ಆಗದಿರುವ ತಪ್ಪೇ?. ಮದುವೆ ಆದ್ರೆ ಮಾತ್ರ ಹೆಣ್ಣು ಬದುಕಲು ಸಾಧ್ಯವೇ?. ಲೇಟ್ ಆಗಿ ಮದುವೆ ಆದ್ರೂ ತಪ್ಪು, ಆಗದೇ ಇದ್ರೂ ತಪ್ಪು, ಮದುವೆ ಮುರಿದು ಹೋದ್ರೂ ತಪ್ಪು, ಮದುವೆ ಆಗಿ ವಾಪಸ್ ಬಂದ್ರೂ ತಪ್ಪು, ಹೆಣ್ಣು ಮಕ್ಕಳಿಗೆ ಯಾಕಿಷ್ಟು ಸಮಸ್ಯೆ, ಹೆಣ್ಮಕ್ಕಳಿಗೆ ಮಾತ್ರ ಯಾಕೀ ಸಮಸ್ಯೆ. ಅವಸರದಲ್ಲಿ ಮದುವೆ ಮಾಡಿ ಕಳುಹಿಸಿ, ಗಂಡನ ಮನೆಯಲ್ಲಿ ಕಷ್ಟಗಳನ್ನು ಸಹಿಸಲಾಗದೇ, ಯಾರ ಬಳಿಯೂ ಹೇಳಲಾಗದೇ, ಗಂಡನ ಮನೆಯಲ್ಲಿರಲಾಗದೇ, ತವರಿಗೆ ಬರಲಾಗದೇ ಅದೆಷ್ಟೋ ಹೆಣ್ಮಕ್ಕಳು ಒದ್ದಾಡುತ್ತಾರೆ. ಮಗಳಿಗೆ ವಿದ್ಯಾಭ್ಯಾಸ ಕೊಡಿಸಿ, ಸಂಸ್ಕಾರ ಕೊಡಿಸಿ, ಮದುವೆ ಮಾಡಿಬಿಟ್ರೆ ಪೋಷಕರು ತಮ್ಮ ಜವಾಬ್ದಾರಿ ಮುಗೀತು ಎಂದುಕೊಳ್ತಾರೆ. ಏನೇ ಆದ್ರೂ ಹೆಣ್ಣನ್ನೇ, ಹೆಣ್ಣೆತ್ತವರನ್ನೇ ಹೀಯಾಳಿಸ್ತಾರೆ, ಅದಕ್ಕೆ ಅನಿಸುತ್ತೆ ಪೂಜೆ ಮಾಡೋ ಯಾವ ದೇವರಿಗೂ ಹೆಣ್ಣು ಮಕ್ಕಳಿಲ್ಲ'' ಎಂದು ಭೂಮಿಕಾ ಪಾತ್ರಧಾರಿ ಛಾಯಾಸಿಂಗ್ ಹೇಳಿದ್ದಾರೆ. ಈ ಸಂಚಿಕೆ ಪ್ರೇಕ್ಷಕರ ಮನಮುಟ್ಟಿದೆ.
ಜೀ ಕನ್ನಡದಲ್ಲಿ 'ಅಮೃತಧಾರೆ' ಎನ್ನುವ ಧಾರವಾಹಿ ಇತ್ತೀಚೆಗಷ್ಟೇ ಪ್ರಸಾರ ಪ್ರಾರಂಭಿಸಿದೆ. ಸಂಜೆ 7 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿಯಲ್ಲಿ ಛಾಯಾಸಿಂಗ್ ನಟಿ, ರಾಜೇಶ್ ನಟರಂಗ ನಟ. ನಾಯಕನ ಹೆಸರು ಗೌತಮ್, ದೊಡ್ಡ ಉದ್ಯಮಿ. ನಾಯಕಿ ಹೆಸರು ಭೂಮಿಕಾ. ಇಬ್ಬರಿಗೂ ಮದುವೆ ಆಗಿಲ್ಲ. ನಟನ ವಯಸ್ಸು 45, ನಟಿಯ ವಯಸ್ಸು 35. ನಟಿಯ ತಮ್ಮ, ನಟನ ತಂಗಿಗೆ ಮದುವೆ ನಿಶ್ಚಯವಾಗಿದೆ. ಈ ಮದುವೆ ಆಗಬೇಕಾದರೆ ನಟಿ ಭೂಮಿಕಾ ಮದುವೆ ಆಗಬೇಕಿದೆ. ಭೂಮಿಕಾ ವರನ್ನು ನೋಡಲು ಬಂದ ಹುಡುಗ ವಂಚಕ ಎಂದು ತಿಳಿದು, ನಟ ಈ ಮದುವೆ ನಿಲ್ಲಿಸಿದ್ದಾರೆ. ಆ ಸಂದರ್ಭ ನಟಿ ಭೂಮಿಕಾ ಈ ಡೈಲಾಗ್ಸ್ ಹೇಳಿದ್ದು, ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಹೆಣ್ಮಕ್ಕಳ ಮೂಕವೇದನೆಗೆ ದನಿ ಆದ ಧಾರಾವಾಹಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.