ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಆರಾಧ್ಯ ಬಚ್ಚನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ಹರಡಿದ ಯೂಟ್ಯೂಬ್ ಟ್ಯಾಬ್ಲಾಯ್ಡ್ ವಿರುದ್ಧ ದೆಹಲಿ ಹೈಕೋರ್ಟ್ಗೆ ದೂರು ಸಲ್ಲಿಸಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ 11 ವರ್ಷದ ಮಗಳು ಆರಾಧ್ಯ, ತಾನು ಅಪ್ರಾಪ್ತೆಯಾಗಿದ್ದು, ತನ್ನ ಬಗ್ಗೆ ಮಾಧ್ಯಮಗಳು ಇಂತಹ ವರದಿಯನ್ನು ಹಬ್ಬುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ತಿಳಿಸಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ಕೋರಿದ್ದಾರೆ.
ಈ ಕುರಿತ ಅರ್ಜಿ ವಿಚಾರಣೆ ಏಪ್ರಿಲ್ 20 ಗುರುವಾರ (ಇಂದು) ನಡೆಯಲಿದೆ. ಬಿಗ್ ಬಿ ಮೊಮ್ಮಗಳ ಕುರಿತಾದ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಅರ್ಜಿಯಲ್ಲಿ ಹತ್ತು ಸಂಸ್ಥೆಗಳನ್ನು ಒತ್ತಾಯಿಸಲಾಗಿದೆ. ಆರಾಧ್ಯ ಓರ್ವ ಸ್ಟಾರ್ ಕಿಡ್ ಆಗಿದ್ದು, ಸಾಮಾನ್ಯವಾಗಿ ಟ್ರೋಲ್ಗೆ ಒಳಗಾಗುತ್ತಲೇ ಇರುತ್ತಾರೆ. ವಿವಿಧ ಕಾರಣಗಳಿಗಾಗಿ ಟ್ರೋಲಿಗರು ಆಗಾಗ ಆರಾಧ್ಯ ಬಚ್ಚನ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ.
ಬಾಬ್ ಬಿಸ್ವಾಸ್ ಪ್ರಚಾರದ ವೇಳೆ ನಟ ಅಭಿಷೇಕ್ ಬಚ್ಚನ್ ಟ್ರೋಲಿಗರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಕುರಿತು ಮಾತನಾಡಿದ್ದ ಅವರು, "ಇದು ಖಂಡಿತವಾಗಿ ಸ್ವೀಕಾರ್ಹವಲ್ಲ. ಇದನ್ನು ನಾನು ಸಹಿಸಲು ಸಾಧ್ಯವಿಲ್ಲ. ನಾನು ಸಾರ್ವಜನಿಕ ವ್ಯಕ್ತಿಯಾಗಿದ್ದೇನೆ ಸರಿ. ಹಾಗಂತ ನನ್ನ ಮಗಳು ಅದೇ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ನನ್ನ ಮಗಳ ಮೇಲಿನ ಕಾಮೆಂಟ್ಗಳಿಗೆ ನಾನು ಅನುಮತಿಸುವುದಿಲ್ಲ. ಪರದೆಯ ಹಿಂದೆ ಟ್ರೋಲ್ ಮಾಡುವ ಬದಲು ನಿಮಗೆ ಏನಾದರೂ ಹೇಳಲು ಇದ್ದರೆ ನನ್ನೊಂದಿಗೆ ನೇರವಾಗಿ ಮಾತನಾಡಿ" ಎಂದು ಅಭೀಷೇಕ್ ವಾರ್ನಿಂಗ್ ಮಾಡಿದ್ದರು.