ಭಾರತ ಚಿತ್ರರಂಗ 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎರಡು ಗೆಲುವಿನೊಂದಿಗೆ ದೊಡ್ಡ ಇತಿಹಾಸ ಸೃಷ್ಟಿಸಿದೆ. ಭಾರತದ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಸಾರಥ್ಯದಲ್ಲಿ ಅತ್ಯದ್ಭುತವಾಗಿ ಮೂಡಿಬಂದ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ಪ್ರತಿಷ್ಟಿತ ಪ್ರಶಸ್ತಿ ಆಸ್ಕರ್ನ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಜೊತೆಗೆ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ, ಗುನೀತ್ ಮೊಂಗಾ ನಿರ್ಮಾಣದ "ದಿ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡು ಭಾರತೀಯ ಮನೋರಂಜನಾ ಕ್ಷೇತ್ರದ ಖ್ಯಾತಿ ಹೆಚ್ಚಿಸಿದೆ.
ದೇಶ, ವಿಶೇಷವಾಗಿ ಚಿತ್ರರಂಗದಲ್ಲೀಗ ಸಂಭ್ರಮದ ವಾತಾವರಣವಿದೆ. ಈ ಐತಿಹಾಸಿಕ ವಿಜಯಕ್ಕೆ ಎಲ್ಲೆಡೆಯಿಂದ ಅಭಿನಂದನೆಯ ಸಂದೇಶ ಹರಿದು ಬರುತ್ತಿದೆ. ಚಿತ್ರರಂಗದ ತಾರೆಯರು ಕೂಡ ಈ ಎರಡೂ ತಂಡವನ್ನು ಶ್ಲಾಘಿಸುವಲ್ಲಿ ಹಿಂದೆ ಸರಿದಿಲ್ಲ. ಬಾಲಿವುಡ್‌ನ ಹಲವು ತಾರೆಯರು ಕೂಡ ಆಸ್ಕರ್ ವಿಜೇತರನ್ನು ಅಭಿನಂದಿಸಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಭಾರತದ ಆಸ್ಕರ್ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಆಸ್ಕರ್ ಗೆಲುವಿನಿಂದ ಬಹಳ ಸಂತೋಷಗೊಂಡಿದ್ದಾರೆ ಮತ್ತು ಈ ಐತಿಹಾಸಿಕ ಗೆಲುವಿಗಾಗಿ ಇಡೀ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
ಅಮಿತಾಭ್ ಬಚ್ಚನ್ ಟ್ವೀಟ್:ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಟ್ವೀಟ್ ಮಾಡಿರುವ ಬಿಗ್ ಬಿ, ''ನಾವು ಗೆದ್ದೆವು, ನಾವು ಎರಡನ್ನು ಗೆದ್ದಿದ್ದೇವೆ, ನಾವು ದೇಶ ಮತ್ತು ಜನರಿಗಾಗಿ ಗೆದ್ದಿದ್ದೇವೆ, ನಾವು ಗೆದ್ದು ಭಾರತದ ಧ್ವಜವನ್ನು ವಿದೇಶದಲ್ಲಿ ಹಾರಾಡುವಂತೆ ಮಾಡಿದ್ದೇವೆಂದು'' ಟ್ವೀಟ್ ಮಾಡಿ ಇಡೀ ಚಿತ್ರತಂಡವನ್ನು ಹೊಗಳಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
'ಪ್ರಾಜೆಕ್ಟ್ ಕೆ':ಹಿರಿಯ ನಟ ಅಮಿತಾಭ್ ಬಚ್ಚನ್ ಇತ್ತೀಚಿನ ದಿನಗಳಲ್ಲಿ ತಮ್ಮ ಮುಂಬರುವ ಚಿತ್ರ 'ಪ್ರಾಜೆಕ್ಟ್ ಕೆ' ವಿಷಯದಲ್ಲಿ ಚರ್ಚೆಯಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್ನಲ್ಲಿ ಈ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಮುಂಬೈಗೆ ಮರಳಿದ್ದು, ಅಂದಿನಿಂದ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.