ಸಂವಿಧಾನದಲ್ಲಿ ಇಂಡಿಯಾ ಪದ ತೆಗೆಯಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇಂಡಿಯಾ ಬದಲು ಭಾರತ್ ಪದ ಬಳಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಭಾರತೀಯ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಟ್ವೀಟ್ ಗಮನ ಸೆಳೆಯುತ್ತಿದೆ. ಹೌದು ಬಿಗ್ ಬಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಟ್ವಿಟರ್) ನಲ್ಲಿ 'ಭಾರತ್ ಮಾತಾ ಕಿ ಜೈ' ಎಂದು ಬರೆದಿದ್ದಾರೆ.
ಇಂಡಿಯಾ ಅಥವಾ ಭಾರತ ಎಂಬ ಚರ್ಚೆ ಉದ್ಭವಿಸಿರುವ ಹಿನ್ನೆಲೆ, ಈ ಹೊತ್ತಿನಲ್ಲಿ ಹೆಸರಾಂತ ನಟ ಟ್ವೀಟ್ ಮಾಡಿರೋದು ಸಹಜವಾಗಿ ಹೆಚ್ಚಿನವರ ಗಮನ ಸೆಳೆದಿದೆ. ಇಂಡಿಯಾದ ಹೆಸರು ಬದಲಾವಣೆಗೆ ಹಿರಿಯ ನಟ ಬೆಂಬಲ ಸೂಚಿಸಿರುವಂತೆ ತೋರುತ್ತಿದೆ. ನಟ ಟ್ವೀಟ್ ಮಾಡುತ್ತಿದ್ದಂತೆ, ಹೆಚ್ಚಿನ ಸಂಖ್ಯೆಯ ಬೆಂಬಲಿಗರು ತಮ್ಮ ಬೆಂಬಲ ಸೂಚಿಸಿದ್ದಾರೆ ಮತ್ತು ಭಾರತ ಎಂಬ ನಾಮಕರಣಕ್ಕೆ ನಟ ತೋರಿರುವ ಬೆಂಬಲಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಕಾಂಗ್ರೆಸ್ ರಾಜ್ಯಸಭಾ ಸಂಸದ ರಮೇಶ್ ಅವರು, ರಾಷ್ಟ್ರಪತಿ ಭವನವು ಸೆಪ್ಟೆಂಬರ್ 9ರ ಜಿ20 ಔತಣಕೂಟಕ್ಕೆ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ' ಎಂಬ ಹೆಸರಿನಲ್ಲಿ ಆಮಂತ್ರಣ ಕಳುಹಿಸಿದೆ ಎಂದು ತಿಳಿಸಿದ್ದಾರೆ.
ಪಿಎಂ ನರೇಂದ್ರ ಮೋದಿ ಅವರು ''ಇತಿಹಾಸವನ್ನು ತಿರುಚುತ್ತಿದ್ದಾರೆ ಮತ್ತು ಭಾರತವನ್ನು ವಿಭಜಿಸಿದ್ದಾರೆ'' ಎಂದು ಆರೋಪಿಸಿರುವ ರಮೇಶ್ ಅವರು, ಇಂಡಿಯಾ (INDIA) ಬಣದಲ್ಲಿನ ಪಕ್ಷಗಳ ಉದ್ದೇಶವೂ ಕೂಡ BHARAT (ring Harmony, Amity, Reconciliation And Trust) ಎಂದು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ತಿಳಿಸಿದ್ದಾರೆ.
ಟ್ವೀಟ್ ಮುಂದುವರಿಸಿರುವ ಅವರು, ''ಹಾಗಾಗಿ ಈ ಸುದ್ದಿ ನಿಜ. ಸೆಪ್ಟೆಂಬರ್ 9ರ ಜಿ20 ಔತಣಕೂಟಕ್ಕೆ ರಾಷ್ಟ್ರಪತಿ ಭವನ ಪ್ರೆಸಿಡೆಂಟ್ ಆಫ್ ಭಾರತ್ ಹೆಸರಿನಲ್ಲಿ ಆಹ್ವಾನ ಪತ್ರಿಕೆ ಕಳುಹಿಸಿದೆ. ಸಂವಿಧಾನದ 1ನೇ ವಿಧಿಯನ್ನು ಇನ್ನು ಹೀಗೆ ಓದಬಹುದು - ಭಾರತ, ಅದು ಇಂಡಿಯಾವಾಗಿತ್ತು, ರಾಜ್ಯಗಳ ಒಕ್ಕೂಟವಾಗಿರುತ್ತದೆ. ಆದ್ರೀಗ ಯೂನಿಯನ್ ಆಫ್ ಸ್ಟೇಟ್ಸ್ ಎಂಬುದು ಕೂಡ ದಾಳಿಗೊಳಗಾಗಿದೆ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಜೈಲರ್ ಗೆದ್ದ ಖುಷಿ: ಮ್ಯೂಸಿಕ್ ಡೈರೆಕ್ಟರ್ ಅನಿರುಧ್ ರವಿಚಂದರ್ಗೆ ಸಿಕ್ತು ದುಬಾರಿ ಕಾರು
ಪಿಎಂ ನರೇಂದ್ರ ಮೋದಿ ಅವರು ಇತಿಹಾಸ ತಿರುಚುವುದನ್ನು ಮುಂದುವರಿಸಬಹುದು, ಭಾರತವನ್ನು ವಿಭಜಿಸಬಹುದು. ಆದರೆ ಅದು ಭಾರತ, ರಾಜ್ಯಗಳ ಒಕ್ಕೂಟ. ನಾವು ತಡೆಯುವುದಿಲ್ಲ. ಅಷ್ಟಕ್ಕೂ ಇಂಡಿಯಾ ಪಕ್ಷಗಳ ಉದ್ದೇಶವೇನು? ಅದುವೇ ಭಾರತ (BHARAT—Bring Harmony, Amity, Reconciliation And Trust). ಭಾರತ ಸೇರುತ್ತದೆ, ಇಂಡಿಯಾ ಗೆಲ್ಲುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಸಂವಿಧಾನದಲ್ಲಿನ 'ಇಂಡಿಯಾ' ಪದ ತೆಗೆದು 'ಭಾರತ' ಅಳವಡಿಕೆ: ವಿಶೇಷ ಅಧಿವೇಶನದಲ್ಲಿ ಕೇಂದ್ರದಿಂದ ಮಸೂದೆ ಮಂಡಿಸುವ ಸಾಧ್ಯತೆ
ಇದೇ ವೇಳೆ ಕೇಂದ್ರ ಸಚಿವ ರಾಜೀವ್ ಚಮದ್ರಶೇಖರ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ದೇಶ ಭಾರತ ಆಗಿದ್ದು, ಭಾರತವಾಗೇ ಉಳಿಯುತ್ತದೆ ಎಂದು ತಿಳಿಸಿದ್ದಾರೆ. ಅವರು ಎಲ್ಲ ವಿಷಯದಲ್ಲೂ ಸಮಸ್ಯೆ ಹೊಂದಿದ್ದಾರೆ, ಈ ಬಗ್ಗೆ ನಾನೇನೂ ಹೇಳುವುದಿಲ್ಲ. ನಾನು ಭಾರತವಾಸಿ, ಭಾರತ ಭಾರತವಾಗೇ ಉಳಿಯುತ್ತದೆ. ಈ ಬಗ್ಗೆ ಕಾಂಗ್ರೆಸ್ ಸಮಸ್ಯೆ ಹೊಂದಿದ್ದರೆ, ಅದಕ್ಕೆ ಅವರೇ ಪರಿಹಾರ ಕಮಡುಕೊಳ್ಳಬೇಕು ಎಂದು ತಿಳಿಸಿದ್ದಾರೆ.