ಲೆಂಜೆಂಡರಿ ಆ್ಯಕ್ಟರ್ ಅಮಿತಾಭ್ ಬಚ್ಚನ್ ನಿನ್ನೆ 81ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಬಾಲಿವುಡ್ ಹಿರಿಯ ನಟನಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಜನಪ್ರಿಯ ನಟನ ನಿವಾಸದೆದುರು ಜನಸಾಗರವೇ ಹರಿದುಬಂದಿತ್ತು. ಪ್ರೀತಿಯ ಧಾರೆಯೆರೆದ ಅಭಿಮಾನಿಗಳಿಗೆ ಬಿಗ್ ಬಿ ಇದೀಗ ಧನ್ಯವಾದ ಸಮರ್ಪಿಸಿದ್ದಾರೆ.
ಬಿಗ್ ಬಿ ಬರ್ತ್ ಡೇ ಸೆಲೆಬ್ರೇಶನ್: ವಿಶೇಷ ದಿನವನ್ನು ಆಚರಿಸಲು ಅಭಿಮಾನಿಗಳು ನಟ ಅಮಿತಾಭ್ ಬಚ್ಚನ್ ಅವರ ಮುಂಬೈನ ಮನೆ 'ಜಲ್ಸಾ'ದ ಗೇಟ್ ಎದುರು ಬಂದು ಸೇರಿದ್ದರು. ಕೇಕ್ ಮತ್ತು ಉಡುಗೊರೆಗಳೊಂದಿಗೆ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. ಬಿಗ್ ಬಿ ಸೂಪರ್ ಹಿಟ್ ಸಿನಿಮಾಗಳ ಪಾತ್ರಗಳನ್ನು ಅಭಿಮಾನಿಗಳು ಪುನರಾವರ್ತಿಸಿದರು. ಅಮಿತಾಭ್ ಅವರಂತೆ ರೆಡಿಯಾಗಿ ಬಂದ ಅಭಿಮಾನಿಗಳ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಭಿಮಾನಿಗಳಿಗೆ ಹೃದಯಸ್ಪರ್ಶಿ ಬರಹ:ಬಿಗ್ ಬಿ ಕೂಡ ಮನೆ ಬಳಿ ಬಂದ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದರು. ಮಂಗಳವಾರ ರಾತ್ರಿ ಕೂಡ ಅಭಿಮಾನಿಗಳೆದುರು ಹಾಜರಾಗಿದ್ದರು ಅಮಿತಾಭ್. ಇಂದು ಹಿರಿಯ ನಟ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಕೃತಘ್ಞತೆ ಸಲ್ಲಿಸುವ ಹೃದಯಸ್ಪರ್ಶಿ ಬರಹವೊಂದನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಿ ಪೋಸ್ಟ್: 81ನೇ ಬರ್ತ್ ಡೇ ಸೆಲೆಬ್ರೇಶನ್ ಮಾಡಿಕೊಂಡಿರುವ ಬಿಗ್ ಬಿ ಇಂದು ಮುಂಜಾನೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳತ್ತ ನಿಂತು ಕೈ ಮುಗಿಯುತ್ತಿರುವ ಅರ್ಥಪೂರ್ಣ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಜೊತೆಗೆ ತಮ್ಮ ಮೇಲೆ ಪ್ರೀತಿ ವ್ಯಕ್ತಪಡಿಸಿದ ಅಭಿಮಾನಿಗಳು, ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಭಿಮಾನಿಗಳಿಂದ ಸ್ವೀಕರಿಸುತ್ತಿರುವ ಪ್ರೀತಿ - ಬೆಂಬಲಕ್ಕಾಗಿ ನಾನು ಆಶೀರ್ವದಿಸಲ್ಪಟ್ಟಿದ್ದೇನೆ. ಯಾವುದನ್ನೂ ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದು ಬಿಗ್ ಬಿ ಬರೆದುಕೊಂಡಿದ್ದಾರೆ..