ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಟ್ವಿಟರ್ ಬ್ಲೂಟಿಕ್ ಚಂದಾದಾರಿಕೆ ವಾಪಸ್ ಪಡೆದ ಹಿನ್ನೆಲೆ ಟ್ವಿಟರ್ ಸಂಸ್ಥೆ ಮಾಲೀಕ ಎಲೋನ್ ಮಸ್ಕ್ ಅವರಿಗೆ ತಮ್ಮದೇ ಶೈಲಿಯಲ್ಲಿ ಧನ್ಯವಾದ ತಿಳಿಸಿದ್ದಾರೆ. ಟ್ವಿಟರ್ ಬ್ಲೂಟಿಕ್ ಸೇವೆಯ ಶುಲ್ಕ ಪಾವತಿಸದ ಹಿನ್ನೆಲೆ ಹಲವು ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯವಾಗಿತ್ತು. ಇದಿಗ ಅಮಿತಾಭ್ ಬಚ್ಚನ್ ಅವರು ತಮ್ಮ ಬ್ಲೂಟಿಕ್ ಅನ್ನು ಮರು ಸಂಪಾದಿಸಿದ್ದಾರೆ.
ಮೆಗಾಸ್ಟಾರ್ ತಮ್ಮ ಟ್ವಿಟರ್ನಲ್ಲಿ ಬ್ಲೂಟಿಕ್ ಚಂದಾದಾರಿಕೆ ವಾಪಸ್ ಪಡೆದ ನಂತರ 1994ರ "ಮೊಹ್ರಾ" ಚಲನಚಿತ್ರದ "ತು ಚೀಸ್ ಬಡಿ ಹೈ ಮಸ್ತ್ ಮಸ್ತ್" ಹಾಡಿನ ಸಾಹಿತ್ಯವನ್ನು ಬಳಸಿ ಎಲೋನ್ ಮಸ್ಕ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. 'ತು ಚೀಸ್ ಬಡಿ ಹೈ ಮಸ್ಕ್ ಮಸ್ಕ್' ಎಂದು ಬಿಗ್ ಬಿ ಬರೆದುಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಟ್ವೀಟ್: "ಹೇ ಮಸ್ಕ್ ಸಹೋದರ, ನಾವು ನಿಮಗೆ ಬಹಳ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನನ್ನ ಹೆಸರಿನ ಮುಂದೆ ನೀಲಿ ಕಮಲ (ಬ್ಲೂ ಟಿಕ್) ಸೇರಿಸಲಾಗಿದೆ. ಈಗ ನಾನು ನಿಮಗೆ ಏನು ಹೇಳಲಿ, ಸಹೋದರ? ನನಗೆ ಹಾಡೊಂದನ್ನು ಹಾಡಬೇಕೆಂದು ಅನಿಸುತ್ತಿದೆ. ನೀವು ಕೇಳಲು ಇಷ್ಟ ಪಡುತ್ತೀರಾ? ಸರಿ ಕೇಳಿ, 'ತು ಚೀಸ್ ಬಡಿ ಹೈ ಮಸ್ಕ್ ಮಸ್ಕ್.....ತು ಚೀಸ್ ಬಡಿ ಹೈ ಮಸ್ಕ್ ಮಸ್ಕ್' ಎಂದು ಬಚ್ಚನ್ ಅವರು ಬರೆದುಕೊಂಡಿದ್ದಾರೆ.
ಬ್ಲೂ ಟಿಕ್ ಮಾಯವಾಗಿದ್ದ ವೇಳೆ, ಸಾಮಾಜಿಕ ಮಾಧ್ಯಮ ವೇದಿಕೆಗೆ ತೆರಳಿ ತಮ್ಮ ನೀಲಿ ಟಿಕ್ ಅನ್ನು ಹಿಂದಿರುಗಿಸುವಂತೆ ಕೇಳಲು ಅದನ್ನು ಅವರು "ನೀಲಿ ಕಮಲ" ಎಂದು ಉಲ್ಲೇಖಿಸಿದ್ದರು. ಹಿರಿಯ ನಟನ ಈ ಹಿಂದಿನ ಟ್ವೀಟ್ನಲ್ಲಿ, ತಮ್ಮ ಬ್ಲೂ ಟಿಕ್ ವಾಪಸ್ ಕೊಡಿ ಎಂದು ಕೇಳಿಕೊಂಡಿದ್ದರು. ನಾನು ಈಗಾಗಲೇ ಹಣ ಪಾವತಿಸಿದ್ದೇನೆ ಎಂದು ತಿಳಿಸಿದ ಬಿಗ್ ಬಿ, ಕೈ ಮುಗಿಯುವ ಎಮೋಜಿ ಬಳಸಿ ಟ್ವೀಟ್ ಮಾಡಿದ್ದರು.