ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮುಂಬರುವ ಚಿತ್ರ 'ಕಲ್ಕಿ 2989 ಎಡಿ' ಸ್ಯಾನ್ ಡಿಯಾಗೋ ಕಾಮಿಕ್ - ಕಾನ್‌ನಲ್ಲಿ ಸದ್ದು ಮಾಡಿರುವ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಾಮಿಕ್ ಕಾನ್ ಈವೆಂಟ್ ಎಷ್ಟು ಮಹತ್ವದ್ದಾಗಿದೆ ಎಂಬುದು ಮಗ ಅಭಿಷೇಕ್ ಬಚ್ಚನ್ ಅವರಿಂದ ಜ್ಞಾನೋದಯವಾಯಿತು ಎಂದು ಅಮಿತಾಭ್ ಹಂಚಿಕೊಂಡರು. 'ಕಲ್ಕಿ 2989 ಎಡಿ' (ಪ್ರಾಜೆಕ್ಟ್ ಕೆ) ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ ಈವೆಂಟ್ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ಸಿನಿಮಾವಾಗಿ ಇತಿಹಾಸ ಸೃಷ್ಟಿಸಿದೆ.
ಝೂಮ್ ಕಾಲ್ ಮೂಲಕ ವರ್ಚುಯಲ್ ಆಗಿ ಈವೆಂಟ್ಗೆ ಸೇರಿಕೊಂಡ ಅಮಿತಾಭ್ ಬಚ್ಚನ್, ಈ ಚಿತ್ರದ ಭಾಗವಾಗಿರುವುದರ ಕುರಿತು ಹೆಮ್ಮೆ ವ್ಯಕ್ತಪಡಿಸಿದರು. "ಈ ಚಿತ್ರಕ್ಕಾಗಿ ನಾಗ್ ಅಶ್ವಿನ್ ನನ್ನನ್ನು ಸಂಪರ್ಕಿಸಿದಾಗ, ಈ ಹಿಂದಿನ ಅವರ ಅತ್ಯುತ್ತಮ ಕೆಲಸಗಳನ್ನು ತಿಳಿದುಕೊಂಡಿದ್ದೆ. 'ಪ್ರಾಜೆಕ್ಟ್ ಕೆ' ಒಂದು ಅಸಾಮಾನ್ಯ ಮತ್ತು ರೋಮಾಂಚಕಾರಿ ಅನುಭವ. ಚಿತ್ರದ ಹಿಂದೆ ದೊಡ್ಡ ರಿಸರ್ಚ್ ನಡೆದಿದೆ. ಶೂಟಿಂಗ್ ಸಮಯದಲ್ಲಿ ಚಿತ್ರ ತಂಡದೊಂದಿಗೆ ನಾನು ಕೆಲ ಅದ್ಭುತ ಕ್ಷಣಗಳನ್ನು ಕಳೆದಿದ್ದೇನೆ. ಕಾಮಿಕ್-ಕಾನ್‌ನಲ್ಲಿರುವ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ'' ಎಂದು ತಿಳಿಸಿದರು.
ಅಲ್ಲದೇ "ನಾವು ಕಾಮಿಕ್-ಕಾನ್‌ಗೆ ಸಾಕ್ಷಿಯಾಗಲು ಆಯ್ಕೆಯಾಗಿದ್ದೇವೆ ಎಂದು ನಾಗ್ ಅಶ್ವಿನ್ ಹೇಳಿದಾಗ, ಅದು ಎಷ್ಟು ಮಹತ್ವದ ಈವೆಂಟ್ ಎಂದು ನನಗೆ ತಿಳಿದಿರಲಿಲ್ಲ. ನನ್ನ ಮಗ ಈ ಅವಕಾಶದ ಮಹತ್ವದ ಬಗ್ಗೆ ನನಗೆ ಅರಿವು ಮಾಡಿಕೊಟ್ಟಿದ್ದಾನೆ" ಎಂದು ತಿಳಿಸಿದರು. ಇನ್ನು ಕಮಲ್ ಹಾಸನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಮಿತಾಭ್, ''ಸಾಧಾರಣ ಕಮಲ್ ಆಗಿರುವುದನ್ನು ನಿಲ್ಲಿಸಿ, ನೀವು ನಮ್ಮೆಲ್ಲರಿಗಿಂತ ದೊಡ್ಡವರು" ಎಂದು ತಿಳಿಸಿದ್ದಾರೆ. ಅಮಿತಾಭ್ ಬಚ್ಚನ್ ಮಾತು ಸಾಕಷ್ಟು ಮೆಚ್ಚುಗೆ ಸ್ವೀಕರಿಸಿದೆ.