ಈ ತಿಂಗಳ ಆರಂಭದಲ್ಲಿ ಬಾಲಿವುಡ್ ಖ್ಯಾತ, ಹಿರಿಯ ನಟ ಅಮಿತಾಭ್ ಬಚ್ಚನ್ ( Amitabh Bachchan) ಅವರು ಶೂಟಿಂಗ್ ಸೆಟ್ನಲ್ಲಿ ಗಾಯಗೊಂಡಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿ ಬರಲಿರುವ 'ಪ್ರಾಜೆಕ್ಟ್ ಕೆ' ಚಿತ್ರದ ಶೂಟಿಂಗ್ ಸೆಟ್ನಲ್ಲಿ ಅಮಿತಾಭ್ ಬಚ್ಚನ್ ಗಾಯಗೊಂಡಿದ್ದರು. ಅಂದು ನಟನನ್ನು ಕೂಡಲೇ ಹೈದರಾಬಾದ್ನ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ವೈದ್ಯತಂಡದ ಸಲಹೆ ಮೇರೆಗೆ ಚಿಕಿತ್ಸೆ, ವಿಶ್ರಾಂತಿ ಪಡೆದರು. ತಮ್ಮ ಅಭಿಮಾನಿಗಳಿಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಆರೋಗ್ಯದ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ.
80 ವರ್ಷದ ಹಿರಿಯ ನಟ ಗುರುವಾರ ರಾತ್ರಿ ತಮ್ಮ ಆರೋಗ್ಯದ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದ್ದೇನೆ ಎಂದು ತಿಳಿಸಿದ್ದಾರೆ. ಅನಾರೋಗ್ಯದ ಅನಾನುಕೂಲತೆಗಳ ಹೊರತಾಗಿಯೂ ಸರಿಪಡಿಸಲು ಬಯಕೆ ಮತ್ತು ಪ್ರಯತ್ನ ಇರಬೇಕು ಎಂದು ಹೇಳಿದ್ದಾರೆ. ಕುಟುಂಬ ಮತ್ತು ಹಿತೈಷಿಗಳ ಪ್ರೀತಿ, ಕಾಳಜಿಗೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.
ಪಕ್ಕೆಲುಬಿನ ಗಾಯಕ್ಕೆ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದೇನೆ. ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ. "ಕೆಲಸದ ವೇಳಾಪಟ್ಟಿಗಳನ್ನು ಮಾಡಲಾಗಿದೆ, ಚಾರ್ಟ್‌ಗಳು ಮತ್ತೆ ತುಂಬಲು ಪ್ರಾರಂಭಿಸುತ್ತವೆ. ಆರೋಗ್ಯದಲ್ಲಿ ಕೊಂಚ ಏರುಪೇರುಗಳಿವೆ. ಪರಿಹಾರವನ್ನು ಕಂಡುಹಿಡಿಯಬೇಕು, ನಾವು ಕಂಡುಕೊಳ್ಳಬೇಕು'' ಎಂದು ತಿಳಿಸಿದ್ದಾರೆ.
ತಮ್ಮ ಮುಂಬರುವ ಚಿತ್ರ 'ಪ್ರಾಜೆಕ್ಟ್ ಕೆ' ಶೂಟಿಂಗ್ ವೇಳೆ ಹೈದರಾಬಾದ್‌ನಲ್ಲಿ ಗಾಯವಾಗಿದೆ ಎಂದು ಅಮಿತಾಭ್ ಬಚ್ಚನ್ ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದರು. ಪ್ರಸ್ತುತ ಮುಂಬೈನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ತನ್ನ ಬ್ಲಾಗ್‌ನಲ್ಲಿ ತಿಳಿಸಿದ್ದರು. ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ ಅವರು ಗಾಯಗೊಂಡಿದ್ದರು.