ಭಾರತೀಯ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಪುತ್ರಿ ಶ್ವೇತಾ ನಂದಾ ಅವರಿಗೆ ಅಪಾರ ಬೆಲೆಬಾಳುವ ಆಸ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಹೆಸರಿನಲ್ಲಿದ್ದ ಬಂಗಲೆಯನ್ನು ಮಗಳ ಹೆಸರಿಗೆ ಮಾಡಿಸಿದ್ದಾರೆ. ಈಗಾಗಲೇ ನೋಂದಣಿ ಕಾರ್ಯ ಕೂಡ ಮುಗಿದಿದೆ ಎಂಬ ಮಾತು ಕೇಳಿ ಬರುತ್ತಿವೆ. ಅಲ್ಲದೇ ಬಂಗಲೆಯ ಮೌಲ್ಯ ತಿಳಿದ ಅಭಿಮಾನಿಗಳು ಹುಬ್ಬೇರಿಸಿದ್ದಾರೆ
ಪ್ರಸಿದ್ಧ ನಟ ಅಮಿತಾಭ್ ಬಚ್ಚನ್ ಮುಂಬೈನಲ್ಲಿ ಸುಮಾರು ಮೂರು ಮನೆಗಳನ್ನು ಹೊಂದಿದ್ದಾರೆ. ಅದರಲ್ಲಿ ಒಂದು 'ಪ್ರತೀಕ್ಷಾ', ಮತ್ತೊಂದು 'ಜಲ್ಸಾ' ಮತ್ತು ಮೂರನೆಯದು 'ಜನಕ್'. ಜನಪ್ರಿಯ ನಟ ತಮ್ಮ ವೃತ್ತಿ ಜೀವನದ ವಿವಿಧ ಹಂತಗಳಲ್ಲಿ ಈ ನಿವಾಸಗಳಲ್ಲಿ ವಾಸಿಸುಸಿದ್ದಾರೆ. ಪ್ರಸ್ತುತ ತಮ್ಮ ಕುಟುಂಬದೊಂದಿಗೆ 'ಜಲ್ಸಾ' ಹೆಸರಿನ ಬಂಗಲೆಯಲ್ಲಿ ತಂಗಿದ್ದಾರೆ. ಇದೀಗ ಮಗಳು ಶ್ವೇತಾ ನಂದಾ ಅವರಿಗೆ ತಮ್ಮ ಮೆಚ್ಚಿನ 'ಪ್ರತೀಕ್ಷಾ' ಹೆಸರಿನ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜುಹು ಪ್ರದೇಶದಲ್ಲಿರುವ ವಿಠಲ್ ನಗರ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ ಈ ಬಂಗಲೆಯ ಮೌಲ್ಯ ಸುಮಾರು 50.63 ಕೋಟಿ ರೂಪಾಯಿ ಎಂದು ವರದಿಯಾಗಿದೆ. ನವೆಂಬರ್ 8 ರಂದು ಅಮಿತಾಭ್ ಎರಡು ಪ್ರತ್ಯೇಕ ಗಿಫ್ಟ್ ಡೀಡ್ಗಳನ್ನು ಮಾಡಿಸಿದ್ದರು. ಅದರ ಭಾಗವಾಗಿ, 'ಪ್ರತೀಕ್ಷಾ' ಬಂಗಲೆಯನ್ನು ಶ್ವೇತಾ ನಂದಾ ಅವರ ಹೆಸರಿಗೆ ಬರೆಸಲಾಗಿತ್ತು. ಈ ನೋಂದಣಿಗೆ 50.65 ಲಕ್ಷ ರೂ.ಗಳನ್ನು ಸ್ಟ್ಯಾಂಪ್ ಡ್ಯೂಟಿ ಶುಲ್ಕವಾಗಿ ಪಾವತಿಸಲಾಗಿದೆ.