ಜನಪ್ರಿಯ ಅಮೆರಿಕನ್ ಬಾಯ್ ಬ್ಯಾಂಡ್ ಬ್ಯಾಕ್ಸ್ಟ್ರೀಟ್ ಬಾಯ್ಸ್ ಗುರುವಾರ ಮುಂಬೈನಲ್ಲಿ ಪ್ರದರ್ಶನ ನೀಡಿತು. ಈ ಸಂಗೀತ ಕಾರ್ಯಕ್ರಮಕ್ಕೆ ಬಾಲಿವುಡ್ ಸಿನಿ ತಾರೆಯರು ಆಗಮಿಸಿದ್ದರು. ಬಾಲಿವುಡ್ ಫಿಟ್ನೆಸ್ ಐಕಾನ್ ಮಲೈಕಾ ಅರೋರಾ, ಬಹುಬೇಡಿಕೆ ನಟಿ ಶ್ರದ್ಧಾ ಕಪೂರ್ ಸೇರಿದಂತೆ ಹಲವು ಜನಪ್ರಿಯ ಸೆಲೆಬ್ರಿಟಿಗಳು ಬ್ಯಾಕ್ಸ್ಟ್ರೀಟ್ ಬಾಯ್ಸ್ ತಂಡದ ಸಂಗೀತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಮಲೈಕಾ ಶ್ರದ್ಧಾ ಅಲ್ಲದೇ ಜಾಕ್ವೆಲಿನ್ ಫರ್ನಾಂಡಿಸ್, ಮೀಜಾನ್ ಜಾಫ್ರಿ, ನಟ ವರುಣ್ ಧವನ್ ಅವರ ಪತ್ನಿ ನತಾಶಾ ದಲಾಲ್, ಡಯಾನಾ ಪೆಂಟಿ ಮತ್ತು ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಕೂಡ ಬ್ಯಾಕ್ಸ್ಟ್ರೀಟ್ ಬಾಯ್ಸ್ ಲೈವ್ ಶೋ ವೀಕ್ಷಿಸಲು ಮುಂಬೈನ ಬಿಕೆಸಿಯ ಜಿಯೋ ಗಾರ್ಡನ್ಸ್ಗೆ ಆಗಮಿಸಿದ್ದರು. ಬಿ ಟೌನ್ ತಾರೆಗಳೆಲ್ಲರೂ ಕ್ಯಾಶುಯಲ್ ಡ್ರೆಸ್ನಲ್ಲಿಯೂ ಕೊಲ್ಲುವ ನೋಟ ಬೀರಿದ್ದರು.
ಈ ಕಾರ್ಯಕ್ರಮದ ಹಲವಾರು ಚಿತ್ರಗಳು ಮತ್ತು ವಿಡಿಯೋಗಳು ಆನ್ಲೈನ್ನಲ್ಲಿ ವೈರಲ್ ಆಗುತ್ತಿದೆ. ಐ ವಾನ್ನಾ ಬಿ ವಿತ್ ಯು ಎಂಬ ಹಿಟ್ ಗೀತೆಯೊಂದಿಗೆ ಶೋ ಆರಂಭಿಸಿದ ಅಮೆರಿಕನ್ ತಂಡ ಸುಮಾರು ಎರಡು ಗಂಟೆಗಳ ಕಾರ್ಯಕ್ರಮ ನೀಡಿತು. ದಿ ಕಾಲ್ ಮತ್ತು ಡೋಂಟ್ ವಾಂಟ್ ಯು ಬ್ಯಾಕ್ ನಂತಹ ಹಾಡುಗಳೊಂದಿಗೆ ದೇಸಿ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಈ ತಂಡ ಯಶಸ್ವಿಯಾಯಿತು.
ಎರಡು ಗಂಟೆಗಳ ಕಾಲದ ಸಂಗೀತ ಕಾರ್ಯಕ್ರಮದ ನಡುವೆ ಅಮೆರಿಕನ್ ಬಾಯ್ ಬ್ಯಾಂಡ್ನ ಸದಸ್ಯ ನಿಕ್ ಕಾರ್ಟರ್ ಅವರು ಭಾರತದಲ್ಲಿರುವ ಅಭಿಮಾನಿಗಳ ಬಗ್ಗೆ ಮಾತನಾಡಿದರು. ಭಾರತದ ತಾಪಮಾನದ ಕುರಿತು ಯಾರಾದರೂ ಬ್ಯಾಂಡ್ಗೆ ಎಚ್ಚರಿಕೆ ನೀಡಬೇಕಿತ್ತು. ಹವಾಮಾನದ ಬಿಸಿ ಬಗ್ಗೆ ನಾನು ಮಾತನಾಡುತ್ತಿಲ್ಲ, ನಿಮ್ಮೆಲ್ಲರ ಅಭಿಮಾನ, ಜೋಶ್ ಬಗ್ಗೆ ಮಾತನಾಡುತ್ತಿದ್ದೇನೆ. ನಾವು ಇಲ್ಲಿ ಹಲವಾರು BSB (Backstreet Boys) ಅಭಿಮಾನಿಗಳನ್ನು ಹೊಂದಿದ್ದೇವೆ ಎಂದು ನಮಗೆ ತಿಳಿದಿರಲಿಲ್ಲ. ಸದ್ಯ ನಾವು ಅದನ್ನು ನೋಡುತ್ತಿದ್ದೇವೆ. ನಾವು ನಿಮ್ಮನ್ನು, ನಿಮ್ಮ ಈ ಅಭಿಮಾನವನ್ನು ಇಷ್ಟ ಪಡುತ್ತೇವೆ. ಇದು ಭಾರತಕ್ಕೆ ನಮ್ಮ ಎರಡನೇ ಭೇಟಿ. ಭಾರತ ವಿಶೇಷವಾಗಿ ಮುಂಬೈಗೆ ಬರಲು ನಾವು ಬಹಳ ಸಮಯದಿಂದ ಕಾಯುತ್ತಿದ್ದೆವು. ಇಂದು ಸಾಕಾರವಾಯಿತು ಎಂದು ತಿಳಿಸಿದರು.