ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ ಅಂಬರೀಶ್ ಇಹಲೋಕ ತ್ಯಜಿಸಿ ಇಂದಿಗೆ ನಾಲ್ಕು ವರ್ಷ. ‘ರೆಬಲ್ ಸ್ಟಾರ್’ ಎಂದು ಪ್ರಖ್ಯಾತರಾಗಿದ್ದ ಅವರು ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿದವರು. ನಟನಾಗಿ, ರಾಜಕಾರಣಿ ಆಗಿ ಸಾಕಷ್ಟು ಗಮನ ಸೆಳೆದಿದ್ದರು. ಇಂದು ಅಂಬರೀಶ್ ಪುಣ್ಯ ಸ್ಮರಣೆ ಪ್ರಯುಕ್ತ ಅವರನ್ನು ಹಲವು ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಪತ್ನಿ, ಪುತ್ರ ಸೇರಿ ಕುಟುಂಬದವರು ಮತ್ತು ಅಭಿಮಾನಿಗಳು ಅಂಬಿ ಸಮಾಧಿ ಸ್ಥಳಕ್ಕೆ ತೆರಳಿ ನಮಿಸಿದ್ದಾರೆ.
ಅಂಬಿ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್, ನಟ ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗು ಸಂಬಂಧಿಕರು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದರು. ಅಂಬರೀಶ್ ಸ್ಮಾರಕ ನಿರ್ಮಾಣ ಕೆಲಸಗಳು ನಡೆಯುತ್ತಿರುವ ಹಿನ್ನೆಲೆ ಸಮಾಧಿ ಬಳಿ ಅಭಿಮಾನಿಗಳಿಗೆ ಪ್ರವೇಶ ಇಲ್ಲ. ಈ ಕಾರಣಕ್ಕೆ ದೂರದಿಂದಲೇ ಅಭಿಮಾನಿಗಳು ಸಮಾಧಿಗೆ ನಮಸ್ಕರಿಸುತ್ತಿದ್ದಾರೆ.