ಬಾಲಿವುಡ್ನ ಹಿರಿಯ ಚಿತ್ರಕಥೆಗಾರ (screenwriter) ಪ್ರಯಾಗ್ ರಾಜ್ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಪ್ರಯಾಗ್ ರಾಜ್ ಅವರು ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಬ್ಲಾಕ್ಬಸ್ಟರ್ ಸಿನಿಮಾಗಳಾದ 'ಅಮರ್ ಅಕ್ಬರ್ ಆಂಥೋನಿ', 'ನಸೀಬ್' ಮತ್ತು 'ಕೂಲಿ'ಯಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ.
ಪ್ರಯಾಗ್ ರಾಜ್ ಅವರು ಶನಿವಾರ ಸಂಜೆ ಬಾಂದ್ರಾ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅವರ ಮಗ ಆದಿತ್ಯ ತಿಳಿಸಿದ್ದಾರೆ. "ಪ್ರಯಾಗ್ ರಾಜ್ ಅವರು ಶನಿವಾರ ಸಂಜೆ 4 ಗಂಟೆಗೆ ಬಾಂದ್ರಾದಲ್ಲಿನ ಅವರ ನಿವಾಸದಲ್ಲಿ ನಿಧನರಾದರು. ಅವರು 8-10 ವರ್ಷಗಳಿಂದ ಹೃದ್ರೋಗ ಮತ್ತು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು" ಎಂದು ಆದಿತ್ಯ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.
ಬಾಂದ್ರಾದ ದಾದರ್ನಲ್ಲಿರುವ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಭಾನುವಾರ ಬೆಳಗ್ಗೆ ಪ್ರಯಾಗ್ ರಾಜ್ ಅವರ ಅಂತ್ಯಕ್ರಿಯೆ ನೆರವೇರಿದೆ. ಈ ವೇಳೆ ಅವರ ಕುಟುಂಬದವರು ಮತ್ತು ಸ್ನೇಹಿತರು ಉಪಸ್ಥಿತರಿದ್ದರು.
ಪ್ರಯಾಗ್ ರಾಜ್ ಬಗ್ಗೆ.. ಅಮಿತಾಭ್ ಬಚ್ಚನ್ ಅವರ ನಸೀಬ್, ಸುಹಾಗ್, ಕೂಲಿ ಮತ್ತು ಮರ್ದ್ ಚಿತ್ರಗಳಿಗೆ ಕಥೆಗಳನ್ನು ಬರೆದಿರುವ ಪ್ರಯಾಗ್ ರಾಜ್, ಬರಹಗಾರರಾಗಿ ಮತ್ತು ಗೀತರಚನೆಕಾರರಾಗಿ ಸುಮಾರು 100ಕ್ಕೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ರಜನಿಕಾಂತ್, ಬಿಗ್ ಬಿ ಮತ್ತು ಕಮಲ್ ಹಾಸನ್ ಅಭಿನಯದ ಗೆರಾಫ್ತರ್ ಚಿತ್ರಕ್ಕೂ ಇವರೇ ಕಥೆಯನ್ನು ಬರೆದಿದ್ದಾರೆ. ರಾಜೇಶ್ ಖನ್ನಾ ಅವರ ರೋಟಿ, ಧರ್ಮೇಂದ್ರ ಮತ್ತು ಜಿತೇಂದ್ರ ಅವರ ಧರಮ್ ವೀರ್ ಹಾಗೂ ಅಮರ್ ಅಕ್ಬರ್ ಆಂಥೋನಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಬರಹಗಾರರಾಗಿ ಅವರ ಕೊನೆಯ ಚಿತ್ರ ದಿವಂಗತ ಎಸ್ ರಾಮನಾಥನ್ ನಿರ್ದೇಶಿಸಿದ 'ಜಮಾನತ್'.