ಬಾಲಿವುಡ್ ನಟಿ ರಾಣಿ ಮುಖರ್ಜಿ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಎರಡೂವರೆ ದಶಕಗಳಿಂದ ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಉತ್ತಮ ಸಿನಿಮಾಗಳನ್ನು ನೀಡುತ್ತಾ ಅಭಿಮಾನಿಗಳ ಆರಾಧ್ಯ ನಟರಲ್ಲಿ ಒಬ್ಬರಾಗಿದ್ದಾರೆ. ಕುಚ್ ಕುಚ್ ಹೋತಾ ಹೈ, ವೀರ್ ಝಾರಾ, ಬ್ಲ್ಯಾಕ್ ಮತ್ತು ಮರ್ದಾನಿಯಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಇವರ ಇತ್ತೀಚಿಗಿನ ಮಿಸಸ್ ಚಟರ್ಜಿ vs ನಾರ್ವೆ ಚಿತ್ರವು ನಿರೀಕ್ಷೆಗೆ ಮೀರಿದ ಯಶಸ್ಸನ್ನು ಕಂಡಿದೆ. ಉತ್ತಮ ವಿಮರ್ಶೆ ಪಡೆದುಕೊಂಡಿದೆ.
ಆದರೆ, ರಾಣಿ ಮುಖರ್ಜಿ ತಮ್ಮ ವೈಯಕ್ತಿಕ ವಿಚಾರಕ್ಕೆ ಬಂದರೆ ಖಾಸಗಿ ವ್ಯಕ್ತಿ. ವೈಯಕ್ತಿಕ ಜೀವನದ ಕುರಿತು ಅವರು ಮಾತನಾಡುವುದು ಬಹಳ ವಿರಳ. ಅವರು ಸಿನಿಮಾಗಳ ಬಗ್ಗೆ ಎಷ್ಟು ಮಾತನಾಡುತ್ತಾರೋ, ಅದೇ ಪರ್ಸನಲ್ ವಿಷಯಗಳಿಗೆ ಬಂದಾಗ ಉತ್ತರಿಸಲು ನಿರಾಕರಿಸುತ್ತಾರೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಆದಿತ್ಯಾ ಚೋಪ್ರಾ ಜೊತೆಗಿನ ಮದುವೆ ಬಗ್ಗೆ ಹಾಗೂ ಆ ವಿಶೇಷ ದಿನದಂದು ಧರಿಸಿದ್ದ ಉಡುಪಿನ ಬಗ್ಗೆ ಮಾತನಾಡಿದ್ದಾರೆ. ಕೆಲವು ಆಸಕ್ತಿದಾಯಕ ವಿಚಾರವನ್ನು ಹಂಚಿಕೊಂಡಿದ್ದಾರೆ.
ರಾಣಿ ಮುಖರ್ಜಿ ಅವರು ಚಲನಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ ಅವರನ್ನು 2014 ರಲ್ಲಿ ಮದುವೆಯಾದರು. ಇಟಲಿಯಲ್ಲಿ ವಿವಾಹ ಸಮಾರಂಭ ಜರುಗಿತ್ತು. ಆದಿತ್ಯ ಚೋಪ್ರಾ ಅವರ ಜೊತೆಗಿನ ಮದುವೆ ನಂತರ ಆದಿತ್ಯ ಚೋಪ್ರಾ ಸೋಷಿಯಲ್ ಮೀಡಿಯಾದಿಂದ ಕೊಂಚ ದೂರವೇ ಉಳಿದಿದ್ದರು. ಆದ್ದರಿಂದ ಅವರ ಮದುವೆ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಎಂದಿಗೂ ಕಂಡು ಬಂದಿರಲಿಲ್ಲ. ನಟಿ ಆಗಲಿ, ಆದಿತ್ಯ ಚೋಪ್ರಾ ಆಗಲಿ ಹಂಚಿಕೊಂಡಿರಲಿಲ್ಲ.