ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ-1 ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇದೀಗ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಾಂಗ ಜೊತೆ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಮಾಡಲಿದ್ದಾರೆ.
ಹೌದು. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಮೊದಲ ಭಾಗದ ಯಶಸ್ಸಿನ ಬಳಿಕ ಪಾರ್ಟ್ 2 ತಯಾರಿಯಲ್ಲಿದ್ದಾರೆ. ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಈ ಸಿನಿಮಾದ ಚಿತ್ರೀಕರಣ ಭರ್ಜರಿಯಲ್ಲಿ ಸಾಗುತ್ತಿದೆ. ಜೊತೆಗೆ ಅಲ್ಲು ಈ ಸಿನಿಮಾ ಬಳಿಕ ಯಾವ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ? ಎಂಬ ಕುತೂಹಲ ಜನರಲ್ಲಿತ್ತು. ಆದರೀಗ ಕುತೂಹಲಕ್ಕೆ ತೆರೆ ಬಿದ್ದಿದೆ.
ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಬಾಲಿವುಡ್ ಅಂಗಳಕ್ಕೆ ಹಾರಿದರು. ಬಳಿಕ ಕಬೀರ್ ಸಿಂಗ್ ಎಂಬ ಹಿಟ್ ಸಿನಿಮಾ ಮಾಡಿದ್ದು, ದೊಡ್ಡ ಮಟ್ಟದಲ್ಲಿಯೇ ಯಶಸ್ವಿ ಕಂಡಿತು. ಅದಾದ ನಂತರ ಮತ್ತೆ ಹಿಂದಿ ಸಿನಿಮಾ ಒಪ್ಪಿಕೊಂಡಿರುವ ನಿರ್ದೇಶಕ, ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾ ಮಾಡುತ್ತಿದ್ದಾರೆ. ಅನಿಮಲ್ನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ರಣಬೀರ್ ಕಪೂರ್ ಜೊತೆ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇದೀಗ ಅನಿಮಲ್ ಚಿತ್ರೀಕರಣ ಮುಗಿಯುವ ಮುನ್ನವೇ ನಿರ್ದೇಶಕ ಸಂದೀಪ್ ರೆಡ್ಡಿ, ಅಲ್ಲು ಅರ್ಜುನ್ ಜೊತೆ ಮುಂದಿನ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ.