ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಅವರ ತಂದೆ, ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ಮಾಪಕರಲ್ಲಿ ಓರ್ವರಾದ ಅಲ್ಲು ಅರವಿಂದ್ ಸಿನಿಮಾ ಬಜೆಟ್ ಕುರಿತು ಮಾತನಾಡುತ್ತಿದ್ದಾಗ ನಟ ಯಶ್ ಅವರ ಉದಾಹರಣೆ ಕೊಟ್ಟರು. ಸಂದರ್ಶನವೊಂದರಲ್ಲಿ ಪಾಲ್ಗೊಂಡು, ಕೇವಲ ತಾರೆಯರ ಉಪಸ್ಥಿತಿಯಿಂದ 'ಹೈ ಬಜೆಟ್' ಆಗುವುದಿಲ್ಲ ಎಂದು ಪ್ರತಿಪಾದಿಸಿದರು. ಇದರ ಜೊತೆಗೆ, ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳಲು ಕನ್ನಡ ಚಿತ್ರರಂಗದ ಹೆಸರಾಂತ ನಟ ಯಶ್ ಹೆಸರನ್ನು ಉದಾಹರಣೆಯಾಗಿ ನೀಡಿದರು. ಬ್ಲಾಕ್ಬಸ್ಟರ್ ಚಿತ್ರದ ಸಂಪೂರ್ಣ ಯಶಸ್ಸು ಕೇವಲ ಸ್ಟಾರ್‌ಗಳ ಜನಪ್ರಿಯತೆಯ ಮೇಲೆ ಅವಲಂಬಿತವಾಗಿಲ್ಲ. ಸ್ಟಾರ್ಸ್ ಪ್ರಭಾವವನ್ನು ಹೆಚ್ಚಿಸಲು ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಬೇಕು. ಅದಕ್ಕೆ ಹೈ ಬಜೆಟ್ ಬೇಕು ಎಂದರು.
ನಿಮ್ಮ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ 'ಗೀತಾ ಆರ್ಟ್ಸ್' ಪ್ರಸ್ತುತ ತನ್ನ ಗಮನವನ್ನು ಬಿಗ್ ಬಜೆಟ್ ಸಿನಿಮಾದಿಂದ ಸಣ್ಣ ಚಿತ್ರಗಳತ್ತ ಏಕೆ ಕೇಂದ್ರೀಕರಿಸಿಕೊಂಡಿದೆ ಎಂಬ ಪ್ರಶ್ನೆ ನಿರ್ಮಾಪಕ ಅಲ್ಲು ಅರವಿಂದ್ ಅವರಿಗೆ ಎದುರಾಯಿತು. ಅದಕ್ಕೆ ಪ್ರತಿಕ್ರಿಯಿಸುತ್ತಾ, 'ವೆಚ್ಚ'ದ ಕುರಿತು ಮಾತನಾಡಿದರು. 'ಸಿನಿಮಾಗಳ ದುಬಾರಿ ವೆಚ್ಚಕ್ಕೆ ಸ್ಟಾರ್ಸ್ ಕಾರಣ' ಎಂಬ ಮಾತನ್ನು ನಿರ್ಮಾಪಕರು ಅಲ್ಲಗಳೆದರು. ಚಿತ್ರದ ನಾಯಕ ನಟ ಸಾಮಾನ್ಯವಾಗಿ ಒಟ್ಟು ಬಜೆಟ್‌ನ ಶೇ 20 ರಿಂದ 25 ರಷ್ಟು ಮಾತ್ರ ಸಂಭಾವನೆಯಾಗಿ ಪಡೆಯುತ್ತಾರೆ ಎಂದು ಹೇಳಿದರು. ಹಾಗಾಗಿ, ಸ್ಟಾರ್‌ಗಳ ಶುಲ್ಕವೇ ಚಿತ್ರದ ಬಜೆಟ್ ಅನ್ನು ಹೆಚ್ಚಿಸುತ್ತದೆ ಎಂದು ಹೇಳುವುದು ಸರಿಯಲ್ಲ. ನಟರ ಶುಲ್ಕದ ಜೊತೆಗೆ, ಅದ್ಧೂರಿ ಸಿನಿಮಾ ನಿರ್ಮಾಣಕ್ಕೆ ಹೆಚ್ಚಿನ ಹಣ ವ್ಯಯವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:ಇಂದು 'ಆಟೋರಾಜ' ಶಂಕರ್ ನಾಗ್ ಜನ್ಮದಿನ: ಅಭಿಮಾನಿಗಳ ಮನದಾಳದಲ್ಲಿ ಶಂಕ್ರಣ್ಣ ಸದಾ ಜೀವಂತ