ಡಾಲಿ ಧನಂಜಯ್ ಅಭಿನಯಿಸಿ ನಿರ್ಮಾಣ ಮಾಡಿರುವ ಬಹು ನಿರೀಕ್ಷಿತ 'ಹೆಡ್ ಬುಷ್' ಸಿನಿಮಾ ಬಿಡುಗಡೆ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲ, ಈ ಸಿನಿಮಾ ಬಿಡುಗಡೆ ಆದ ಮೂರೇ ದಿನಕ್ಕೆ ರಾಜ್ಯಾದ್ಯಂತ 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಡಾಲಿ ಸಿನಿಮಾ ಜರ್ನಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಇದೀಗ 'ಹೆಡ್ ಬುಷ್' ಸಿನಿಮಾದ ಸುತ್ತ ವಿವಾದಗಳು ಸುತ್ತಿಕೊಂಡಿವೆ.
ವೀರಗಾಸೆ ಕಲಾವಿದರಿಗೆ ಅವಮಾನ: ಮೊದಲನೇಯದಾಗಿ ಈ ಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಸೋಷಿಯಲ್ ಮೀಡಿಯಾದಲ್ಲಿ ಹೆಡ್ ಬುಷ್ ಸಿನಿಮಾ ಬಯ್ಕಾಟ್ ಅಭಿಯಾನ ಶುರುವಾಗಿದೆ. ವೀರಗಾಸೆ ಕಲಾವಿದರು ವೀರಗಾಸೆ ಮಾಡುವಾಗ ಶೂ ಧರಿಸುವುದಿಲ್ಲ. ಆದರೆ ಈ ಚಿತ್ರದಲ್ಲಿ ಶೂ ಧರಿಸಿದ್ದು, ಅಲ್ಲದೇ ಅವರನ್ನು ಹೊಡೆಯುವ ದೃಶ್ಯ ಸಹ ಇದೆ ಎಂದು ಆರೋಪ ಮಾಡಲಾಗಿದೆ. ಹಾಗಾಗಿ ನಟ ಧನಂಜಯ್ ವೀರಗಾಸೆ ಕಲಾವಿದರನ್ನು ಇಂದು ಭೇಟಿ ಮಾಡಿ, ಅವರ ಬಳಿ ಈ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ.
ಕರಗದ ಬಗ್ಗೆ ಹಗುರವಾದ ಪದ ಬಳಕೆ ಆರೋಪ: ಹೆಡ್ ಬುಷ್ ಚಿತ್ರದಲ್ಲಿ ಬೆಂಗಳೂರು ಕರಗದ ಬಗ್ಗೆ ಅಂದ್ರೆ, ದೈವದ ಬಗ್ಗೆ ಬಹಳ ಹಗುರವಾದ ಪದಗಳ ಬಳಕೆ ಮಾಡಲಾಗಿದೆಯಂತೆ. ಸಂಪ್ರದಾಯಬದ್ಧ ದೈವ ಆಚರಣೆಯನ್ನು ಚಿತ್ರದಲ್ಲಿ ಬೇಕಾಬಿಟ್ಟಿ ತೋರಿಸಲಾಗಿದೆ ಎಂದು ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯ ಆರೋಪ ಮಾಡಿದೆ. ಈ ಕುರಿತು 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಾತನಾಡಿರುವ ಧರ್ಮರಾಯ ಸ್ವಾಮಿ ದೇವಸ್ಥಾನ ಹಾಗೂ ಕರಗ ಸಮಿತಿ ಅಧ್ಯಕ್ಷ ಸತೀಶ್ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.