ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ರಣವೀರ್ ಕಪೂರ್ ಜೋಡಿಯಾಗಿ ನಟಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾ ನೋಡದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್ ಅಭಿಯಾನ ಆರಂಭಿಸಲಾಗಿದೆ. ನಟಿಯು ಇತ್ತೀಚೆಗೆ ದುರಂಕಾರದ ಹೇಳಿಕೆಯೊಂದನ್ನು ನೀಡಿದ್ದು ಇದಕ್ಕೆ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಅವರ ನಟನೆಯ ಬ್ರಹ್ಮಾಸ್ತ್ರ ಚಿತ್ರವೂ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದ್ದು, ಅದನ್ನು ವೀಕ್ಷಿಸದಂತೆ ಟ್ವಿಟರ್‌ನಲ್ಲಿ 'ಬಹಿಷ್ಕಾರ ಬ್ರಹ್ಮಾಸ್ತ್ರ ಹ್ಯಾಶ್‌ಟ್ಯಾಗ್' ಅನ್ನು ಟ್ರೆಂಡ್ ಮಾಡಲು ಪ್ರಾರಂಭಿಸಿದ್ದಾರೆ.
ಸಂದರ್ಶನವೊಂದರಲ್ಲಿ ಬಾಲಿವುಡ್ ಚಿತ್ರಗಳಿಗೆ ತಟ್ಟುತ್ತಿರುವ ಬಾಯ್ಕಾಟ್ ಬಿಸಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಾಯ್ಕಾಟ್ ಎಂದು ಹೇಳುವವರು ಅಥವಾ ನನ್ನನ್ನು ಇಷ್ಟಪಡದವರು ನನ್ನ ಸಿನಿಮಾಗಳನ್ನು ನೋಡಬೇಡಿ ಎಂದಿದ್ದಾರೆ. ಈ ಹೇಳಿಕೆ ಸಹಜವಾಗಿ ನೆಟಿಜನ್‌ಗಳನ್ನು ರೊಚ್ಚಿಗೆಬ್ಬಿಸಿದೆ. ಅವರು ಮಾತನಾಡಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದುರಹಂಕಾರಿ ನಟಿಯೆಂದು ಪ್ರಸ್ತಾಪಿಸುತ್ತ ಅನೇಕ ಟ್ವಿಟರ್ ಬಳಕೆದಾರರು ಅವರ ಮುಂಬರುವ ಚಿತ್ರ ಬ್ರಹ್ಮಾಸ್ತ್ರವನ್ನು ಬಹಿಷ್ಕರಿಸುವುದಾಗಿ ಹೇಳುತ್ತಿದ್ದಾರೆ.
ಬಾಯ್ಕಾಟ್ ಪ್ರವೃತ್ತಿಯಿಂದಾಗಿ ಬಾಲಿವುಡ್ ಬಣ್ಣ ಕಳೆದುಕೊಳ್ಳುತ್ತಿರುವಂತೆ ತೋರುತ್ತಿದೆ. ನೀವು ಬಯಸಿದಂತೆ ಆಗಲಿ ಎಂದು ಟ್ವಿಟರ್ ಬಳಕೆದಾರರೊಬ್ಬರು ವ್ಯಂಗ್ಯದ ಟ್ವೀಟ್ ಮಾಡಿದ್ದಾರೆ. ಕರೀನಾ ಕಪೂರ್ ಖಾನ್ ಅವರಿಂದ ಆಲಿಯಾ ಭಟ್ ಸ್ಫೂರ್ತಿ ಪಡೆದಿರಬಹುದು. ಅವರು ಸಹ ಲಾಲ್ ಸಿಂಗ್ ಚಡ್ಡಾ ಸಿನಿಮಾ ವಿಚಾರದಲ್ಲಿ ಇಂಥಹದ್ದೇ ಮಾತುಗಳನ್ನು ಆಡಿದ್ದರು. ಆ ಸಿನಿಮಾ ಏನಾಯಿತೆಂದು ಎಲ್ಲರಿಗೂ ಗೊತ್ತು. ಈ ಬಿಸಿ ನಿಮಗೂ ತಟ್ಟಲಿದೆ. ಮುಂಬರುವ ನಿಮ್ಮ ಬ್ರಹ್ಮಾಸ್ತ್ರ ಸಿನಿಮಾಗೂ ಬಾಯ್ಕಾಟ್ ಅಸ್ತ್ರ ಪ್ರಯೋಗಿಸುವುದಾಗಿ ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.