ಮುಂಬೈನಲ್ಲಿ ನಡೆದ 'ಜೀ ಸಿನಿಮಾ ಅವಾರ್ಡ್2023' ಸಮಾರಂಭದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅತ್ಯುತ್ತಮ ಮಹಿಳಾ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 'ಗಂಗೂಬಾಯಿ ಕಾಥಿಯಾವಾಡಿ' ಚಿತ್ರದ ನಟನೆಗೆ ಈ ಪ್ರಶಸ್ತಿ ಲಭಿಸಿದೆ. ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಸಂಮಾರಂಭದಲ್ಲಿ 'RRR' ಚಿತ್ರದ 'ನಾಟು ನಾಟು' ಮತ್ತು ಗಂಗೂಬಾಯಿ ಕಾಥಿಯಾವಾಡಿ 'ಧೊಲಿಡಾ' ಹಾಡಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ಆಲಿಯಾ ವೇದಿಕೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟರು. ಬಿಳಿ ಬಣ್ಣದ ಸೀರೆಯಲ್ಲಿ ವೇದಿಕೆಗೆ ಆಗಮಿಸಿದ ಆಲಿಯಾ ಭರ್ಜರಿ ನೃತ್ಯ ಪ್ರದರ್ಶಿಸುವ ಮೂಲಕ ಅಭಿಮಾನಿಗಳು ಸೇರಿದಂತೆ ನೆರೆದಿದ್ದ ತಾರಾಗಣದ ಮೆಚ್ಚುಗೆ ಗಳಿಸಿದರು.
ನಾಟು ನಾಟು ನೃತ್ಯದ ವೇಳೆ ಆಲಿಯಾ ಜೊತೆಗೂಡಿ ಕಾರ್ಯಕ್ರಮದ ನಿರೂಪಕರಾಗಿದ್ದ ನಟ ಆಯುಷ್ಮಾನ್ ಖುರಾನಾ ಮತ್ತು ಸಹ ನಿರೂಪಕ ಅಪರಶಕ್ತಿ ಖುರಾನಾ ಕುಣಿದರು. ಆಗ ವೇದಿಕೆಯ ಮೆರುಗು ಮತ್ತಷ್ಟು ಹೆಚ್ಚಿತು. ನೃತ್ಯದ ವಿಡಿಯೋಗಳನ್ನು ಆಲಿಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೆಂಪು ಬಣ್ಣದ ಕಾರಿನಲ್ಲಿ ಆಲಿಯಾ ವೇದಿಕೆಗೆ ಎಂಟ್ರಿ ಕೊಟ್ಟಿದ್ದು, ಬಳಿಕ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡಿರುವುದನ್ನು ನೋಡಬಹುದು.
ಎಂಎಂ ಕೀರವಾಣಿ ಸಂಯೋಜಿಸಿರುವ ನಾಟು ನಾಟು ಹಾಡನ್ನು ರಾಹುಲ್ ಮತ್ತು ಸಿಪ್ಲಿಗುಂಜ್ ಹಾಡಿದ್ದಾರೆ. ಈ ಹಾಡು ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಪ್ರಖ್ಯಾತಿ ಹೊಂದಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿಗರೂ ಕುಣಿದು ಕುಪ್ಪಳಿಸಿದ್ದಾರೆ.
ಭಾನುವಾರ ಈ ಹಾಡಿಗೆ ಭಾರತದಲ್ಲಿರುವ ದಕ್ಷಿಣ ಕೊರಿಯಾದ ರಾಯಭಾರಿ ಕಚೇರಿಯ ನೌಕರರು ಹೆಜ್ಜೆ ಹಾಕಿದ್ದು, ವಿಡಿಯೋವನ್ನು ದಕ್ಷಿಣ ಕೋರಿಯಾದ ರಾಯಭಾರಿ ಕಚೇರಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಇದನ್ನು ಪ್ರಧಾನಿ ಮೋದಿ ಅವರೂ ಕೂಡ ತಮ್ಮ ಖಾತೆಯಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಜನಪ್ರಿಯ ನಟಿ ಹನಿಯಾ ಅಮೀರ್ ಮದುವೆ ಕಾರ್ಯಕ್ರಮ ಒಂದರಲ್ಲಿ 'ನಾಟು ನಾಟು' ಹಾಡಿನ ಹಿಂದಿ ಆವೃತ್ತಿಗೆ ನೃತ್ಯ ಮಾಡಿದ್ದರು.