ಬಾಲಿವುಡ್ ನಟಿ ಆಲಿಯಾ ಭಟ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಜಿಗ್ರಾ'. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಯಶಸ್ಸಿನ ಬಳಿಕ ಮಾಡುತ್ತಿರುವ ಚಿತ್ರವಿದು. ಆಲಿಯಾ ಈ ಪ್ರಾಜೆಕ್ಟ್ನಲ್ಲಿ ನಟನೆ ಜೊತೆ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಬುಧವಾರ 'ಜಿಗ್ರಾ' ಚಿತ್ರೀಕರಣ ಪ್ರಾರಂಭಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಾಸನ್ ಬಾಲಾ ನಿರ್ದೇಶನದ 'ಜಿಗ್ರಾ'ದಲ್ಲಿ, ತನ್ನ ಸಹೋದರನನ್ನು ರಕ್ಷಿಸುವ ಸಲುವಾಗಿ ಯಾವುದೇ ಹಂತಕ್ಕೂ ಹೋಗುವ ಸಹೋದರಿ ಪಾತ್ರವನ್ನು ಆಲಿಯಾ ಭಟ್ ನಿರ್ವಹಿಸಲಿದ್ದಾರೆ.
ಬುಧವಾರ ರಾತ್ರಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಆಲಿಯಾ ಭಟ್ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಲಿಯಾ ತಮ್ಮ ಸಹೋದರಿ ಶಾಹೀನ್ ಭಟ್ ಜೊತೆಗಿರೋದನ್ನು ಕಾಣಬಹುದು. ಶೂಟಿಂಗ್‌ಗೂ ಮುನ್ನ ಮೇಕಪ್ ಮಾಡಿಸಿಕೊಳ್ಳುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ, ನಿರ್ದೇಶಕ ವಾಸನ್ ಬಾಲಾ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಸಣ್ಣ ಜಿಗ್ರಾ ಬ್ಯಾನರ್ ಅನ್ನು ದಿಟ್ಟಿಸಿ ನೋಡುವ ಫೋಟೋವನ್ನೂ ಆಲಿಯಾ ಶೇರ್ ಮಾಡಿದ್ದಾರೆ.
ಶೂಟಿಂಗ್ನ ಮೊದಲ ದಿನದ ಫೋಟೋಗಳನ್ನು ಹಂಚಿಕೊಂಡ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ನಟಿ, "ಚಿತ್ರೀಕರಣ ಆರಂಭಿಸಿದ್ದೇವೆ. ನಮ್ಮ ಜಿಗ್ರಾಗೆ ಜೀವ ಕೊಡುವ ಮೊದಲ ದಿನ. ನಮ್ಮ ಚಿತ್ರವನ್ನು ತೆರೆ ಮೇಲೆ ತರಲಿದ್ದು, ನಮ್ಮೊಂದಿಗಿರಿ. ಮುಂದಿನ ಪ್ರಯಾಣ ಆರಂಭಗೊಂಡಿದೆ" ಎಂದು ಬರೆದುಕೊಂಡಿದ್ದಾರೆ.