ಹೈದರಾಬಾದ್:ಬಾಲಿವುಡ್ ನಟರಾದಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅಭಿನಯದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಹೊಸ ಚಿತ್ರದ 'ತುಮ್ ಕ್ಯಾ ಮಿಲೇ' ಎಂಬ ರೋಮ್ಯಾಂಟಿಕ್ ಹಾಡನ್ನು ಚಿತ್ರತಂಡ ಬುಧವಾರ ರಿಲೀಸ್ ಮಾಡಿದೆ. ನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಅಮಿತಾಭ್ ಭಟ್ಟಾಚಾರ್ಯ ಬರೆದು ಪ್ರೀತಮ್ ಸಂಯೋಜಿಸಿರುವ ಹಾಡನ್ನು ಅರಿಜಿತ್ ಸಿಂಗ್ ಮತ್ತು ಶ್ರೇಯಾ ಘೋಷಾಲ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಕಾಶ್ಮೀರದ ಸುಂದರ ಗಿರಿಶಿಖರದ ಸುತ್ತಮುತ್ತನಲ್ಲಿ ಚಿತ್ರೀಕರಿಸಲಾಗಿದ್ದು ಕಣ್ಮನ ಸೆಳೆಯುವಂತಿದೆ.
ಧರ್ಮ ಪ್ರೊಡಕ್ಷನ್ಸ್ ಸಂಸ್ಥೆಯು ಹಾಡನ್ನು ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಪ್ರೀತಿಯಿಂದ ಮತ್ತು ಪ್ರೀತಿಗಾಗಿ! 'ತುಮ್ ಕ್ಯಾ ಮಿಲೇ' ಹಾಡಿಗೆ ತಮ್ಮ ಸುಮಧುರ ಕಂಠ ನೀಡಿದ ಅರಿಜಿತ್ ಸಿಂಗ್ ಮತ್ತು ಶ್ರೇಯಾ ಘೋಷಾಲ್ ಅವರಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.
ನಿರ್ಮಾಪಕ ಕರಣ್ ಜೋಹರ್ ಅವರ 25ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಜುಲೈ 28ರಂದು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಬಿಡುಗಡೆಯಾಗಲಿದೆ. ಹಾಡು ಬಿಡುಗಡೆಗೆ ಗಂಟೆಗಳಿಗೂ ಮುನ್ನ ಕರಣ್ ಜೋಹರ್ ತಮ್ಮ ಮುಂಬರುವ ಚಲನಚಿತ್ರದ ಹಾಡಿನ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದರು. ಈ ಹಾಡನ್ನು ತನ್ನ ಚಿಕ್ಕಪ್ಪ ಹಾಗು ಖ್ಯಾತ ನಿರ್ದೇಶಕ ಯಶ್ ಚೋಪ್ರಾ ಅವರಿಗೆ ಅರ್ಪಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಹಿಮಾವೃತ ಪ್ರದೇಶದಲ್ಲಿ ಆಲಿಯಾ- ರಣವೀರ್ ನಡುವಿನ ಹಾಟ್ ಕೆಮಿಸ್ಟ್ರಿ ಉತ್ತಮವಾಗಿ ಮೂಡಿಬಂದಿದ್ದು 90ರ ದಶಕದ ಯಶ್ ಚೋಪ್ರಾ ಚಲನಚಿತ್ರಗಳ ನೆನಪುಗಳನ್ನು ಮರಳಿಸುವಂತಿದೆ. ಆಲಿಯಾ ಚಿಫೋನ್ ಸೀರೆಯಲ್ಲಿ ಮಿಂಚಿದರೆ, ರಣವೀರ್ ಕಪ್ಪು ವರ್ಣದ ಕೋಟ್ ಟೀ-ಶರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ.