ನವದೆಹಲಿಯಲ್ಲಿಂದು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮೂರು ಗಂಟೆಯಿಂದ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜೇತರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ನಟಿ ಆಲಿಯಾ ಭಟ್ ಅವರು ಗಂಗೂಬಾಯಿ ಕಥಿಯಾವಾಡಿ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆ ಬಾಲಿವುಡ್ ಅಭಿನೇತ್ರಿ ನವದೆಹಲಿ ತಲುಪಿದ್ದಾರೆ.
ಇಂದು ಬೆಳಗ್ಗೆ ಮುಂಬೈನ ಕಲಿನಾ ವಿಮಾನ ನಿಲ್ದಾಣದ ಬಳಿ ನಟಿ ಆಲಿಯಾ ಭಟ್ ಅವರು ಕಾಣಿಸಿಕೊಂಡರು. ಸೂಪರ್ ಹಿಟ್ ಗಂಗೂಬಾಯಿ ಕಥಿಯಾವಾಡಿ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಬಾಲಿವುಡ್ ಅಭಿನೇತ್ರಿ ಆಲಿಯಾ ಭಟ್ ಸ್ವೀಕರಿಸುತ್ತಿರುವ ಚೊಚ್ಚಲ ಪ್ರಶಸ್ತಿ ಇದು. ವಿಮಾನ ನಿಲ್ದಾಣದ ಬಳಿ ಪತಿ, ಬಾಲಿವುಡ್ ಬಹುಬೇಡಿಕೆ ನಟ ರಣ್ಬೀರ್ ಕಪೂರ್ ಜೊತೆ ಕಾಣಿಸಿಕೊಂಡರು.
ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿನ ಅಭಿನಯಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಲು ಸಿದ್ಧರಾಗಿರುವ ಆಲಿಯಾ ಭಟ್ ಅವರಿಗಿಂದು ಮಹತ್ವದ ದಿನ. ಹಿಂದಿ ಚಿತ್ರರಂಗದಲ್ಲಿ ದಶಕ ಪೂರೈಸಿ, ಹಲವು ಹಿಟ್ ಸಿನಿಮಾಗಳನ್ನು ನೀಡಿ ಇದೇ ಮೊದಲ ಬಾರಿಗೆ ದೇಶದ ಪ್ರತಿಷ್ಟಿತ ಪ್ರಶಸ್ತಿಯನ್ನು ಪಡೆಯಲು ಸಜ್ಜಾಗಿದ್ದಾರೆ. ಆಲಿಯಾ ಭಟ್ ವೃತ್ತಿಜೀವನದಲ್ಲಿ ಇದೊಂದು ಮೈಲಿಗಲ್ಲು ಎಂದೇ ಹೇಳಬಹುದು.
ಆಗಸ್ಟ್‌ನಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಲಾಯಿತು. ಆಲಿಯಾ ಭಟ್ ಜೊತೆ ಬಾಲಿವುಡ್ನ ಮತ್ತೋರ್ವ ಬಹುಬೇಡಿಕೆ ನಟಿ ಕೃತಿ ಸನೋನ್ ಕೂಡ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ. ಮಿಮಿ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕೆ ಕೃತಿ ಈ ಪ್ರಶಸ್ತಿ ಪಡೆಯಲಿದ್ದಾರೆ.
ಇದನ್ನೂ ಓದಿ:69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಸಮಯ, ಸ್ಥಳ, ವಿಜೇತರು ಸೇರಿ ಸಂಪೂರ್ಣ ಮಾಹಿತಿ