ಅಕ್ಷಯ್ ಕುಮಾರ್ ಬಾಲಿವುಡ್ ಬಹುಬೇಡಿಕೆ ನಟರಲ್ಲಿ ಪ್ರಮುಖರು. ವಿಭಿನ್ನ ಪಾತ್ರ, ಅಮೋಘ ಅಭಿನಯದ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಒಂದು ಕಾಲದಲ್ಲಿ ಇವರು ನಟಿಸಿದ ಚಿತ್ರಗಳೆಲ್ಲವೂ ಹಿಟ್ ಸಾಲಿಗೆ ಸೇರಿದೆ ಅಂದ್ರೆ ಆಶ್ಚರ್ಯವೇನಿಲ್ಲ. ಸತತ ಸೂಪರ್ ಹಿಟ್ ಸಿನಿಮಾಗಳನ್ನು ಮನೋರಂಜನಾ ಕ್ಷೇತ್ರಕ್ಕೆ ನೀಡಿರುವ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಹಿನ್ನಡೆ ಅನುಭವಿಸಿರೋದು ಮಾತ್ರ ಸತ್ಯ. ಇದೀಗ ಹೊಸ ಹುಮ್ಮಸ್ಸಿನೊಂದಿಗೆ ಹೊಸ ಚಿತ್ರ ಮಾಡಿದ್ದಾರೆ. ಇಂದು ಅಕ್ಷಯ್ ಕುಮಾರ್ ನಟನೆಯ ಮುಂದಿನ ಸಿನಿಮಾ 'ಸೆಲ್ಫಿ' ಟ್ರೈಲರ್ ಬಿಡುಗಡೆ ಆಗಿದೆ.
ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆ:ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಸೆಲ್ಫಿ ಚಿತ್ರದ ನಿರ್ಮಾಪಕರು ಇಂದು ಚಿತ್ರದ ಟ್ರೈಲರ್ ಅನ್ನು ಅನಾವರಣಗೊಳಿಸಿದ್ದಾರೆ. ರಾಜ್ ಮೆಹ್ತಾ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಡಯಾನಾ ಪೆಂಟಿ ಮತ್ತು ನುಶ್ರತ್ ಭರುಚ್ಚಾ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ವಿಶಿಷ್ಟವಾದ ಕಥಾಹಂದರದೊಂದಿಗೆ ತೆರೆ ಮೇಲೆ ಮಿಂಚಲು ರೆಡಿ ಆಗಿದ್ದಾರೆ. ಸೆಲ್ಫಿ ಸಿನಿಮಾ ಫೆಬ್ರವರಿ 24 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.
ಸೆಲ್ಫಿ ಟ್ರೈಲರ್:ವಾಹನದ, ಡ್ರೈವಿಂಗ್ ಬಗೆಗಿನ ಅಕ್ಷಯ್ ಕುಮಾರ್ ಅವರ ಪ್ರೀತಿಯನ್ನು ಟ್ರೈಲರ್ ಪ್ರಸ್ತುತಪಡಿಸಿದೆ. ಅಕ್ಷಯ್ ಕುಮಾರ್ ತಮ್ಮ ಪರವಾನಗಿಯನ್ನು ಕಳೆದುಕೊಂಡಾಗ ಈ ಚಿತ್ರದ ಕಥೆ ಪ್ರಾರಂಭವಾಗುತ್ತದೆ. ನಟ ಇಮ್ರಾನ್ ಹಶ್ಮಿ ಅವರು ಟ್ರಾಫಿಕ್ ಇನ್ಸ್‌ಪೆಕ್ಟರ್ ಪಾತ್ರ ನಿರ್ವಹಿಸಿದ್ದಾರೆ.
ಮಲಯಾಳಂ ಚಿತ್ರ ಡ್ರೈವಿಂಗ್ ಲೈಸೆನ್ಸ್‌ನ ರೀಮೇಕ್:ಈ ಮೊದಲೇ ತಿಳಿಸಿದಂತೆ, ಅಕ್ಷಯ್ ಅಭಿನಯದ ಈ ಸೆಲ್ಫಿ ಸಿನಿಮಾ ಮಲಯಾಳಂ ಚಲನಚಿತ್ರ ಡ್ರೈವಿಂಗ್ ಲೈಸೆನ್ಸ್‌ನ ಅಧಿಕೃತ ಹಿಂದಿ ರಿಮೇಕ್ ಆಗಿದೆ. ಮಲೆಯಾಳಂ ಚಿತ್ರದಲ್ಲಿ ಪೃಥ್ವಿರಾಜ್ ಮತ್ತು ಸುರಾಜ್ ವೆಂಜರಮೂಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲಾಲ್ ಜೂನಿಯರ್ ಆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಿಂದಿ ರೀಮೇಕ್‌ನಲ್ಲಿ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ನಟಿಸಿದ್ದಾರೆ. ಈ ಚಿತ್ರವನ್ನು ದಿವಂಗತ ಅರುಣಾ ಭಾಟಿಯಾ, ಹಿರೂ ಯಶ್ ಜೋಹರ್, ಸುಪ್ರಿಯಾ ಮೆನನ್, ಕರಣ್ ಜೋಹರ್, ಪೃಥ್ವಿರಾಜ್ ಸುಕುಮಾರನ್, ಅಪೂರ್ವ ಮೆಹ್ತಾ ಮತ್ತು ಲಿಸ್ಟಿನ್ ಸ್ಟೀಫನ್ ನಿರ್ಮಿಸಿದ್ದಾರೆ.