ಬಾಲಿವುಡ್ ಬಹುಬೇಡಿಕೆಯ ನಟರ ಪೈಕಿ ಅಕ್ಷಯ್ ಕುಮಾರ್ ಪ್ರಮುಖರು. ಶಿಸ್ತುಬದ್ಧ ಡಯಟ್, ವಿಭಿನ್ನ ಪಾತ್ರ, ಅತ್ಯುತ್ತಮ ನಟನೆಯಿಂದಲೂ ಇವರು ಹೆಸರುವಾಸಿ. ತಮ್ಮ ಅಮೋಘ ಅಭಿನಯದ ಮುಖೇನ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನೂ ಅಕ್ಕಿ ಸಂಪಾದಿಸಿದ್ದಾರೆ. ಒಂದು ಕಾಲದಲ್ಲಿ ನಟನ ಸಿನಿಮಾಗಳೆಲ್ಲವೂ ಹಿಟ್ ಪಟ್ಟಿ ಸೇರುತ್ತಿದ್ದವು. ಸೂಪರ್ ಹಿಟ್ ಚಿತ್ರಗಳನ್ನು ಮನೋರಂಜನಾ ಕ್ಷೇತ್ರಕ್ಕೆ ನೀಡಿರುವ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಅದ್ಯಾಕೋ ಭಾರಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಇತ್ತೀಚಿನ ಅವರ ಚಿತ್ರಗಳು ಹಿಟ್ ಸಾಲಿನ ವಿಚಾರ ಬಿಡಿ, ಹಾಕಿದ ಕಾಸೂ ಕೈ ಸೇರದಂತಾಗುತ್ತಿದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಫೆ. 24ರಂದು ತೆರೆಕಂಡ ಸೆಲ್ಫಿ.
ಸೋಲಿಗೆ ನಾನೇ ಕಾರಣ: ಸೆಲ್ಫಿ ಚಿತ್ರದ ಆರಂಭಿಕ ಕಲೆಕ್ಷನ್ ಸಂಖ್ಯೆ ನಿರಾಶಾದಾಯಕವಾಗಿದೆ. ಕಳೆದ ಒಂದು ದಶಕದಲ್ಲಿ ಮೊದಲ ದಿನವೇ ಕಡಿಮೆ ಕಲೆಕ್ಷನ್ ಮಾಡಿರುವ ಚಿತ್ರವಿದು. ಈ ಹಿಂದೆ, 2010ರಲ್ಲಿ ತೆರೆಕಂಡ 'OMG' ಚಿತ್ರ ಅತಿ ಕಡಿಮೆ ಕಲೆಕ್ಷನ್ ಮಾಡಿದ ಚಿತ್ರವಾಗಿತ್ತು.) ಮೊದಲ ದಿನದ ಕಲೆಕ್ಷನ್ 4.25 ಕೋಟಿ ರೂ. ಆಗಿತ್ತು. ಇದೀಗ ತೆರೆಕಂಡಿರುವ ಸೆಲ್ಫಿ ಕೇವಲ 2.55 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ವರದಿಯಾಗಿದೆ. ತಮ್ಮ ಚಿತ್ರದ ಸೋಲಿಗೆ ತಾನೇ ಕಾರಣವೆಂದು ನಟ ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ, ಒಂದರ ನಂತರ ಒಂದರಂತೆ ಸಿನಿಮಾಗಳು ಕೆಲಸ ಮಾಡದಿರುವುದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. "ಕುಳಿತು ಯೋಚಿಸುವ ಮತ್ತು ತನ್ನನ್ನು ತಾನು ಬದಲಾಯಿಸಿಕೊಳ್ಳುವ ಸಮಯ ಇದು" ಎಂದು ಹೇಳಿಕೊಂಡಿದ್ದಾರೆ. ತನಗೆ ಇದು ಹೊಸ ಹಂತವೇನಲ್ಲ ಎಂದು ಹೇಳಿರುವ ನಟ ಬಾಕ್ಸ್ ಆಫೀಸ್‌ನಲ್ಲಿ ತಮ್ಮ ಚಿತ್ರಗಳ ಸೋಲಿನ ಹೊಣೆಯನ್ನು ಅವರೇ ಹೊತ್ತುಕೊಂಡಿದ್ದಾರೆ.
ಇತ್ತೀಚೆಗೆ ಸತತ 3-4 ಫ್ಲಾಪ್ ಚಿತ್ರಗಳನ್ನು ನೀಡಿರುವ ಅಕ್ಷಯ್, "ಈ ಅನುಭವ ನನಗೆ ಮೊದಲ ಬಾರಿಗೆ ಆಗುತ್ತಿಲ್ಲ. ನನ್ನ ಸಿನಿಮಾ ಜೀವನದಲ್ಲಿ ನಾನು ಒಂದೇ ಬಾರಿಗೆ 16 ಚಿತ್ರಗಳನ್ನು ನೀಡಿದ್ದೇನೆ, ಅದು ಬಾಕ್ಸ್ ಆಫೀಸ್‌ನಲ್ಲಿ ಸೋತಿವೆ. ನಾನು ಸತತವಾಗಿ 8 ಚಿತ್ರಗಳನ್ನು ಮಾಡಿದ ಸಮಯವಿತ್ತು, ಆದರೆ ಅದು ಕೂಡ ಕೆಲಸ ಮಾಡಲಿಲ್ಲ. ಮತ್ತೊಮ್ಮೆ ನನ್ನ ಬಳಿ ಇದ್ದ ಮೂರು-ನಾಲ್ಕು ಚಿತ್ರಗಳು ಸಹ ಕೆಲಸ ಮಾಡಲಿಲ್ಲ. ಚಿತ್ರ ಓಡದೇ ಇರುವುದು ನಮ್ಮದೇ ತಪ್ಪಿನಿಂದಾಗಿದೆ. ಪ್ರೇಕ್ಷಕರು ಬದಲಾಗಿದ್ದಾರೆ. ನಾವು ಬದಲಾಗಬೇಕಿದೆ" ಎಂದು ತಿಳಿಸಿದ್ದಾರೆ.