ಅಕ್ಷಯ್ ಕುಮಾರ್ ಭಾರತೀಯ ಸಿನಿಮಾ ರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ಓರ್ವರು. ಹಲವು ವರ್ಷಗಳಿಂದ ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಕಿಲಾಡಿ ನಟ ದೇಶಭಕ್ತಿ ಮತ್ತು ಭಾರತೀಯ ಸೇನೆಯನ್ನು ಬೆಂಬಲಿಸುವ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನನ್ನು ಗುಣಗಾನ ಮಾಡಲು ಹಲವು ಕಾರಣಗಳಿದ್ದರೆ, ಟ್ರೋಲ್ ಮಾಡಲು ಪೌರತ್ವದ ವಿಷಯವಿತ್ತು. ಹೌದು, ಟ್ರೋಲರ್ಗಳು ನಟನನ್ನು ಕೆನಡಿಯನ್ ಕುಮಾರ್ ಎಂದೇ ಗುರುತಿಸಿದ್ದರು.
ಶುಭ ಸುದ್ದಿ ಹಂಚಿಕೊಂಡ ಸೂಪರ್ಸ್ಟಾರ್:ಆದ್ರೆ ಸ್ವಾತಂತ್ರ್ಯ ದಿನಾಚರಣೆಯಂದು ನಟ ತಾವೀಗ ಅಧಿಕೃತವಾಗಿ ಭಾರತೀಯನಾಗಿದ್ದೇನೆಂದು ತಿಳಿಸಿದ್ದಾರೆ. ಬಾಲಿವುಡ್ ಕಿಲಾಡಿ ಆಗಸ್ಟ್ 15ರಂದು ಅಧಿಕೃತವಾಗಿ ಭಾರತೀಯ ಪೌರತ್ವ ಪಡೆದಿದ್ದಾರೆ. ಈ ಶುಭ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ತಿಳಿಸಿದ್ದಾರೆ.
ಅಕ್ಷಯ್ ಕುಮಾರ್ ಪೋಸ್ಟ್:ಪೌರತ್ವ ಪಡೆದಿರುವ ದಾಖಲೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ಅಕ್ಷಯ್ ಕುಮಾರ್, ಮನಸ್ಸು ಮತ್ತು ಪೌರತ್ವ ಎರಡೂ ಹಿಂದೂಸ್ತಾನಿ, ಸ್ವಾತಂತ್ರ್ಯ ದಿನದ ಶುಭಾಶಯಗಳು, ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.
ಕೆಲ ವರ್ಷಗಳ ಹಿಂದೆ ವೈಯಕ್ತಿಕ ಪರಿಸ್ಥಿತಿ ನಟನನ್ನು ಕೆನಡಾ ಪೌರತ್ವ ಆಯ್ದುಕೊಳ್ಳುವಂತೆ ಪ್ರೇರೇಪಿಸಿತು. ಕೆನಡಿಯನ್ ಇಂಡಿಯನ್ ಸ್ಟಾರ್ ಎಂದು ಗುರುತಿಸಿಕೊಂಡರು. ಅದಾಗ್ಯೂ, ಕಳೆದೊಂದು ದಶಕದಲ್ಲಿ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿ ಮಾಡಿದವರ ಪೈಕಿ ನಟ ಅಕ್ಷಯ್ ಕುಮಾರ್ ಅಗ್ರ ಕ್ರಮಾಂಕದಲ್ಲಿದ್ದಾರೆ. ಕೆನಡಾ ಪೌರತ್ವ ಹೊಂದಿದ್ದ ವಿಷಯ ನಟನನ್ನು ಟೀಕೆಗೊಳಗಾಗುವಂತೆ ಮಾಡಿತ್ತು. ಕೆನಡಿಯನ್ ಕುಮಾರ್ ಎಂದು ನಟನನ್ನು ಟ್ರೋಲ್ ಮಾಡಲಾಗಿತ್ತು. ಅಂತಿಮವಾಗಿ ನಟ ಭಾರತೀಯ ಪ್ರಜೆಯಾಗಿದ್ದಾರೆ.