ಕೆಲವು ತಿಂಗಳ ಹಿಂದೆ 'ಸೇನಾಪುರ' ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಈ ವೇಳೆ ಸದ್ಯದಲ್ಲೇ ಇನ್ನೊಂದು ಹೊಸ ಚಿತ್ರದ ಘೋಷಣೆ ಮಾಡುವುದಾಗಿ ನಿರ್ದೇಶಕ ಗುರು ಸಾವನ್ ಹೇಳಿದ್ದರು. ಅದರಂತೆ ಇದೀಗ 'ಮನ್ ರೇ' ಎಂಬ ಸಿನಿಮಾದೊಂದಿಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಅನೇಕ ಚಿತ್ರಗಳಲ್ಲಿ ನಟಿಸಿರುವ ಅಜಯ್ ರಾಜ್ ಹಾಗೂ ಐಶ್ವರ್ಯಾ ರಂಗರಾಜನ್ 'ಮನ್ ರೇ'ಗೆ ನಾಯಕ-ನಾಯಕಿಯಾಗಿದ್ದಾರೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಗುರು ಸಾವನ್, "'ಮನ್ ರೇ' ಎಂದರೆ ಮನಸ್ಸಿನ ಎಕ್ಸ್ ರೇ ಎಂದರ್ಥ. ಮನಸ್ಸಿನ ತೊಳಲಾಟವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಕಾನ್ಶಿಯಸ್ ಮತ್ತು ಸಬ್ ಕಾನ್ಶಿಯಸ್ ಮೈಂಡ್ ನಡುವಿನ ತೊಳಲಾಟವಿದು. ಸುಮಾರು 8 ರಿಂದ 9 ವರ್ಷಗಳ ಹಿಂದೆಯೇ ಕಥೆ ಮಾಡಿಕೊಂಡಿದ್ದೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ. ಸಂಪೂರ್ಣ ಕಾಲ್ಪನಿಕ ಕಥೆ" ಎಂದು ತಿಳಿಸಿದರು.
"ಇಂತಹದ್ದೊಂದು ಸಮಸ್ಯೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ನಾವು ಏನೋ ಕೆಲಸ ಮಾಡುತ್ತಿದ್ದರೆ, ಮನಸ್ಸು ಇನ್ನೇನೋ ಯೋಚಿಸುತ್ತಿರುತ್ತದೆ. ಇಲ್ಲಿ ನಾಯಕ ಆರವ್, ಭ್ರಮೆಯ ಲೋಕದಲ್ಲಿ ಬದುಕುತ್ತಿರುತ್ತಾನೆ. ಅವನು ವಾಸ್ತವಕ್ಕೆ ಹೇಗೆ ಬರುತ್ತಾನೆ. ಅವನ ಸುತ್ತಲಿನವರು, ಅವನ ಈ ಸಮಸ್ಯೆಯಿಂದ ಎಷ್ಟೆಲ್ಲಾ ಕಷ್ಟಪಡುತ್ತಾರೆ ಎನ್ನುವುದನ್ನು ಈ ಚಿತ್ರದ ಮೂಲಕ ತೋರಿಸಲು ಪ್ರಯತ್ನ ಮಾಡುತ್ತಿದ್ದೇವೆ. ಪ್ರಮೋದ್ ಶೆಟ್ಟಿ ಇಲ್ಲಿ ಅರಸ್ ಎಂಬ ವೈದ್ಯರ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಪ್ರೀಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ" ಎಂದು ಮಾಹಿತಿ ನೀಡಿದರು.
ಬಳಿಕ ನಾಯಕ ನಟ ಅಜಯ್ ರಾಜ್ ಮಾತನಾಡಿ, "ಸಾಮಾನ್ಯವಾಗಿ ಸೈಕಲಾಜಿಕಲ್ ಥ್ರಿಲ್ಲರ್ ಎಂದರೆ ಕ್ರೈಮ್ ಅಥವಾ ಹಿಂಸೆ ಇರುತ್ತದೆ. ಆದರೆ, ಈ ಚಿತ್ರದಲ್ಲಿ ಅಂಥದ್ದು ಯಾವುದೂ ಇರುವುದಿಲ್ಲ. ಸರಳವಾಗಿ ಹೇಳಬೇಕು ಎಂದರೆ ಇದು ಮನಸ್ಸಿನೊಳಗೆ ನಡೆಯುವ ಸಂಘರ್ಷ. ಇಲ್ಲಿ ನಾಯಕನೇ ಸಮಸ್ಯೆ. ಅವನಿಂದ ಏನಾಗುತ್ತದೆ ಎಂಬುದು ಕಥೆ" ಎಂದರು.