ಸಿನಿಮಾ ಎಂಬ ಗ್ಲ್ಯಾಮರ್ ಲೋಕಕ್ಕೆ ದಿನೇ ದಿನೇ ಹೊಸ ಟ್ಯಾಲೆಂಟ್ ಇರುವ ಪ್ರತಿಭೆಗಳ ಆಗಮನ ಆಗುತ್ತಿದೆ. ಈ ಮಧ್ಯೆ ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳಿಂದ ಕನ್ನಡದ ಹೆಸರಾಂತ ಚಿತ್ರಗಳಿಗೆ ಕಥೆ ಬರೆದಿರುವ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಕನ್ನಡ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 'ಗನ್ಸ್ ಅಂಡ್ ರೋಸಸ್' ಎಂಬ ಚಿತ್ರದ ಮೂಲಕ ನಾಯಕನಾಗಿ ಅರ್ಜುನ್ ಚಿತ್ರರಂಗ ಪ್ರವೇಶಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು.
ಈ ವೇಳೆ ಮೊದಲು ಮಾತು ಶುರು ಮಾಡಿದ ಅಜಯ್ ಕುಮಾರ್, "ನಾನು ಚಿತ್ರರಂಗದಲ್ಲಿ ಕಥೆಗಾರನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದೆ. ಈಗ 'ಗನ್ಸ್ ಅಂಡ್ ರೋಸಸ್' ಎಂಬ ಚಿತ್ರದ ಮೂಲಕ ನನ್ನ ಮಗ ನಾಯಕನಾಗುತ್ತಿದ್ದಾನೆ. ಸಾಕಷ್ಟು ವರ್ಷಗಳಿಂದ ನನಗೆ ತಾವೆಲ್ಲರೂ ಪ್ರೋತ್ಸಾಹ ನೀಡಿದ್ದೀರಿ. ನನ್ನ ಮಗನಿಗೂ ನಿಮ್ಮೆಲ್ಲರ ಬೆಂಬಲವಿರಲಿ" ಎಂದು ಪ್ರೇಕ್ಷಕರಲ್ಲಿ ಕೇಳಿಕೊಂಡರು.
ಬಳಿಕ ಈ ಚಿತ್ರದ ನಿರ್ದೇಶಕ ಶ್ರೀನಿವಾಸ್ ಕುಮಾರ್ ಮಾತನಾಡಿ, "ನಾನು ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದಗಳು. ಈ ಚಿತ್ರದ ಮೂಲಕ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇದು ಅರ್ಜುನ್ಗೆ ಮೊದಲ ಚಿತ್ರ. ಖಂಡಿತವಾಗಿಯೂ ಪ್ರೇಕ್ಷಕರಿಗೆ ಅವರು ಇಷ್ಟ ಆಗ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.