ನಟ ಅಜಯ್ ದೇವಗನ್ ಅಭಿನಯದ, ಬಾಲಿವುಡ್ ಬಹುನಿರೀಕ್ಷಿತ ಚಿತ್ರ 'ಭೋಲಾ' ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಮಾರ್ಚ್ 30ರಂದು ತೆರೆ ಕಾಣಲು ಸಜ್ಜಾಗಿರುವ 'ಭೋಲಾ' ಸಿನಿಮಾ ಪ್ರಚಾರ ಬಿರುಸಿನಿಂದ ಸಾಗಿದೆ.
ಆದ್ರೆ ಬಾಲಿವುಡ್ ನಟ ಅಜಯ್ ದೇವಗನ್ ಭೋಲಾ ಪ್ರಚಾರದಿಂದ ವಿರಾಮ ತೆಗೆದುಕೊಂಡು ಟ್ವಿಟರ್ನಲ್ಲಿ ಆಸ್ಕ್ ಮಿ ಎನಿಂಥಿಂಗ್ (ask me anything, ನನಗೆ ಏನು ಬೇಕಾದರೂ ಕೇಳಿ) ಸೆಶನ್ ನಡೆಸಿದರು. ತಮ್ಮ ಮುಂಬರುವ ಚಿತ್ರ ಭೋಲಾದಿಂದ ಹಿಡಿದು ವಿವಿಧ ವಿಷಯಗಳ ಕುರಿತು ತಮ್ಮ ಅಭಿಮಾನಿಗಳೊಂದಿಗೆ ಮಾತನಾಡಿದರು. ಈ ಸೆಶನ್ನಲ್ಲಿ, ಅಜಯ್ ದೇವ್ಗನ್ ಪುತ್ರ ಯುಗ್ ಅವರ ಬಾಲಿವುಡ್ ಎಂಟ್ರಿ ಬಗ್ಗೆ ಕೇಳಲಾಯಿತು. ಅದಕ್ಕೆ ನಟ ತಮಾಷೆಯ ಉತ್ತರ ನೀಡಿದರು.
'ಸಮಯಕ್ಕೆ ಸರಿಯಾಗಿ ಊಟ ಮಾಡಲಿ....'!: ಸೋಶಿಯಲ್ ಮೀಡಿಯಾ ಬಳಕೆದಾರರು, ನಿಮ್ಮ ಮಗನನ್ನು ಸಿನಿಮಾ ಲೋಕದಲ್ಲಿ ಯಾವಾಗ ಲಾಂಚ್ ಮಾಡುತ್ತೀರಿ ಎಂದು ಅಜಯ್ ಅವರಲ್ಲಿ ಪ್ರಶ್ನಿಸಿದರು. ಸಿನಿಮಾ ಕ್ಷೇತ್ರದಲ್ಲಿ ತನ್ನ ಮಗನ ಲಾಂಚ್ ಬಗ್ಗೆ ತನಗೆ ಯಾವುದೇ ಕಲ್ಪನೆಯಿಲ್ಲ, ಆದರೆ ಈ ಸಮಯದಲ್ಲಿ ತನ್ನ ಮಗ ಸಮಯಕ್ಕೆ ಸರಿಯಾಗಿ ಊಟ ಮಾಡಿದರೆ ಅದು ತುಂಬಾ ಒಳ್ಳೆಯದು ಎಂದು ಅವರು ಹೇಳಿದರು.
1999ರ ಫೆಬ್ರವರಿಯಲ್ಲಿ ಅಜಯ್ ದೇವ್ಗನ್ ಅವರು ನಟಿ ಕಾಜೋಲ್ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದರು. ಈ ದಂಪತಿ ಮೊದಲು ಹಲ್ಚಲ್ (Hulchul) ಸೆಟ್‌ನಲ್ಲಿ ಪರಸ್ಪರ ಭೇಟಿ ಆದರು. 1994ರಲ್ಲಿ ಡೇಟಿಂಗ್ ಪ್ರಾರಂಭಿಸಿ 1999ರಲ್ಲಿ ಮದುವೆ ಆದರು. ರಾಜು ಚಾಚಾ, ಪ್ಯಾರ್ ತೋ ಹೋನಾ ಹಿ ಥಾ, ಇಷ್ಕ್, ದಿಲ್ ಕ್ಯಾ ಕರೆ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಜೋಡಿ ಕೊನೆಯದಾಗಿ 2020ರಲ್ಲಿ ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್‌ನಲ್ಲಿ ಸೈಫ್ ಅಲಿ ಖಾನ್ ಜೊತೆಗೆ ಒಟ್ಟಿಗೆ ಕಾಣಿಸಿಕೊಂಡರು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅಜಯ್ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು.