ಹೈದರಾಬಾದ್:ಕಳೆದ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ್ದ ಸ್ಯಾಂಡಲ್ವುಡ್ ನಟ ಸುದೀಪ್, 'ಹಿಂದಿ ರಾಷ್ಟ್ರ ಭಾಷೆ ಅಲ್ಲ. ಅದನ್ನು ರಾಷ್ಟ್ರೀಯ ಭಾಷೆಯನ್ನಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಜಯ್ ದೇವಗನ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.
ಅಜಯ್ ದೇವಗನ್ ಈ ಕುರಿತು ಮಾಡಿರುವ ಟ್ವೀಟ್‌ನಲ್ಲಿ, ಕಿಚ್ಚ ಸುದೀಪ್ ಅವರ ಹೇಳಿಕೆ ಉಲ್ಲೇಖಿಸಿ, 'ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದ ಮೇಲೆ ನೀವೇಕೆ ಡಬ್ ಮಾಡಿ ನಿಮ್ಮ ಚಿತ್ರಗಳನ್ನು ಹಿಂದಿಯಲ್ಲಿ ರಿಲೀಸ್ ಮಾಡುತ್ತೀರಿ?' ಎಂದು ಪ್ರಶ್ನಿಸಿದ್ದಾರೆ.
ಅಜಯ್ ದೇವಗನ್ ಟ್ವೀಟ್‌ನಲ್ಲಿ ಹೇಳಿದ್ದೇನು?:ನನ್ನ ಸಹೋದರ ಕಿಚ್ಚ ಸುದೀಪ್, ನಿಮ್ಮ ಅಭಿಪ್ರಾಯದ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆ ಆಗಿಲ್ಲ ಅಂದಮೇಲೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡಿ ಏಕೆ ರಿಲೀಸ್ ಮಾಡುತ್ತೀರಿ? ಹಿಂದಿ ನಮ್ಮ ಮಾತೃ ಭಾಷೆಯೂ ಹೌದು, ರಾಷ್ಟ್ರೀಯ ಭಾಷೆಯೂ ಹೌದು. ಮುಂದೆಯೂ ಆಗಿರುತ್ತದೆ ಎಂದಿದ್ದಾರೆ.
ಕಿಚ್ಚ ಸುದೀಪ್ ಪ್ರತಿಕ್ರಿಯೆ:ಅಜಯ್ ದೇವಗನ್ ಮಾಡಿರುವ ಟ್ವೀಟ್ಗೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಹಲೋ ಅಜಯ್ ದೇವಗನ್ ಸರ್, ನಾನು ಆ ಸಾಲು ಹೇಳಿರುವ ಹಿನ್ನೆಲೆಗೂ ಅದು ನಿಮ್ಮನ್ನು ತಲುಪಿರುವುದಕ್ಕೂ ತುಂಬಾ ವ್ಯತ್ಯಾಸವಿದೆ. ನಿಮ್ಮನ್ನು ಖುದ್ದಾಗಿ ಭೇಟಿಯಾದಾಗ ಈ ಬಗ್ಗೆ ನಾನು ಚರ್ಚೆ ಮಾಡುತ್ತೇನೆ. ನಾನು ಆ ರೀತಿಯಾಗಿ ಹೇಳಿರುವುದು ಯಾರನ್ನೋ ನೋಯಿಸಲು ಅಥವಾ ಇನ್ಯಾರೊಂದಿಗೆ ವಾದ ಮಾಡಲು ಅಲ್ಲ. ನಾನೇಕೆ ಹಾಗೆ ಮಾಡಲಿ? ಎಂದಿದ್ದಾರೆ. ಇದರ ಜೊತೆಗೆ, ಈ ದೇಶದಲ್ಲಿರುವ ಎಲ್ಲ ಭಾಷೆಗಳನ್ನೂ ನಾನು ಗೌರವಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡೋಣ ಎಂದಿದ್ದಾರೆ.
ನೀವು ಹಿಂದಿಯಲ್ಲಿ ಕಳುಹಿಸಿರುವ ಟೆಕ್ಸ್ಟ್ ನನಗೆ ಅರ್ಥವಾಯಿತು. ನಾವೆಲ್ಲರನ್ನೂ ಗೌರವಿಸಿದ್ದೇವೆ, ಪ್ರೀತಿಸುತ್ತೇವೆ. ಜೊತೆಗೆ ಹಿಂದಿಯನ್ನು ಕಲಿತಿದ್ದೇವೆ. ತಪ್ಪಲ್ಲ ಸರ್, ಆದರೆ ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿದ್ರೆ ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯಪಡುತ್ತಿದ್ದೆ! ನಾವೆಲ್ಲರೂ ಭಾರತಕ್ಕೆ ಸೇರಿದವರಲ್ಲವೇ ಸರ್ ಎಂದು ಟ್ವೀಟ್ ಮಾಡಿದ್ದಾರೆ.
ಅಜಯ್ ದೇವಗನ್ಗೆ ನೆಟ್ಟಿಗರಿಂದ ತರಾಟೆ:ಈ ವಿಚಾರವಾಗಿ ಅನೇಕರು ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತದಲ್ಲಿ ಅಧಿಕೃತವಾಗಿ ರಾಷ್ಟ್ರೀಯ ಭಾಷೆಯ ಸ್ಥಾನಮಾನವನ್ನು ಹಿಂದಿಗೆ ನೀಡಿಲ್ಲ ಎಂದಿದ್ದಾರೆ. ಕನ್ನಡದಂತೆ ಹಿಂದಿ ಕೂಡ ಒಂದು ಭಾಷೆಯಾಗಿದೆ. ನಿಮ್ಮ ಮುಂಬರುವ ಚಿತ್ರ 'ರನ್ವೇ 34' ಪ್ರಚಾರಕ್ಕೋಸ್ಕರ ಈ ರೀತಿಯಾಗಿ ಗಿಮಿಕ್ ಮಾಡ್ಬೇಡಿ ಎಂದಿದ್ದಾರೆ.
ಭಾರತೀಯ ಸಂವಿಧಾನದಲ್ಲಿ ಯಾವುದೇ ಭಾಷೆಗೂ ರಾಷ್ಟ್ರೀಯ ಭಾಷೆಯ ಅರ್ಹತೆ ನೀಡಿಲ್ಲ. ಕನ್ನಡ, ತೆಲುಗು ರೀತಿಯಲ್ಲೇ ಹಿಂದಿ ಕೂಡ ಒಂದು ಭಾಷೆಯಾಗಿದೆ ಎಂದು ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.