2021ರ ಡಿಸೆಂಬರ್ 17ರಂದು ಪುಷ್ಪ ಪಾರ್ಟ್ 1 (ಪುಷ್ಪ ದಿ ರೈಸ್) ಸಿನಿಮಾ ತೆರೆಕಂಡು ಸೂಪರ್ ಹಿಟ್ ಅಗಿದೆ. ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದ ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು 'ನ್ಯಾಶನಲ್ ಕ್ರಶ್' ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದರು. ಅದ್ಭುತ ಅಭಿನಯದಿಂದ ಅಭಿಮಾನಿಗಳನ್ನು ಮನರಂಜಿಸುವಲ್ಲಿ ಯಶಸ್ವಿ ಆಗಿದ್ದರು. ಪುಷ್ಪ ದಿ ರೈಸ್ ಸಿನಿಮಾ ಈ ಇಬ್ಬರೂ ಕಲಾವಿದರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದೆ. ಸ್ಯಾಂಡಲ್ವುಡ್ ಮೂಲದ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ಇದೀಗ ತಮಿಳು ನಟಿ ಐಶ್ವರ್ಯಾ ರಾಜೇಶ್ ಅವರು ರಶ್ಮಿಕಾ ಮಂದಣ್ಣ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಫರ್ಹಾನಾ ಸಿನಿಮಾ ಪ್ರಚಾರದಲ್ಲಿ ಕಾಲಿವುಡ್ ನಟಿ ಐಶ್ವರ್ಯಾ ರಾಜೇಶ್ ಅವರು ಪುಷ್ಪ ಚಿತ್ರದಲ್ಲಿನ ರಶ್ಮಿಕಾ ಪಾತ್ರದ ಬಗ್ಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಚೆನ್ನಾಗಿ ನಟಿಸಿದ್ದಾರೆ. ಆದರೆ ನನಗೂ ಕೂಡ ಶ್ರೀವಲ್ಲಿ ರೀತಿಯ ಪಾತ್ರಗಳಲ್ಲಿ ನಟಿಸಲು ಇಷ್ಟ. ಅವಕಾಶ ಸಿಕ್ಕರೆ ಅಂತಹ ಪಾತ್ರಗಳಲ್ಲಿ ಉತ್ತಮವಾಗಿ ನಟಿಸುತ್ತೇನೆ ಎಂದು ಹೇಳಿದ್ದಾರೆ.
ಇದೀಗ ಅವರ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನೆಟ್ಟಿಗರು ಕೂಡ ತಮ್ಮದೇ ಆದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಲವರು ರಶ್ಮಿಕಾ ಮಂದಣ್ಣ ಪರ ನಿಂತರೆ, ಮತ್ತೊಂದಿಷ್ಟು ಮಂದಿ ಐಶ್ವರ್ಯಾ ರಾಜೇಶ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ಟಾರೆ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.