ಬಚ್ಚನ್ ಕುಟುಂಬ ಬಾಲಿವುಡ್ನ ಪವರ್ಫುಲ್ ಕುಟುಂಬವಾಗಿ ಗುರುತಿಸಿಕೊಂಡಿದೆ. ಪರಸ್ಪರರು ಪ್ರತಿಭೆ, ಕೆಲಸಗಳಿಗೆ ಬೆಂಬಲ ಸೂಚಿಸುತ್ತ ಬಂದಿದ್ದಾರೆ. ಈಗಾಗಲೇ ಇಂತಹ ಹಲವು ಉದಾಹರಣೆಗಳನ್ನು ನೋಡಿದ್ದೇವೆ. ಶನಿವಾರ ರಾತ್ರಿ ಮುಂಬೈನ ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಯಾ ಬಚ್ಚನ್ ಹೊರತುಪಡಿಸಿ ಇಡೀ ಬಚ್ಚನ್ ಕುಟುಂಬ ಹಾಜರಾಗಿತ್ತು. ಮುಂಬೈನಲ್ಲಿ ನಡೆದ ಈ ಕಬಡ್ಡಿ ಪಂದ್ಯದಲ್ಲಿ ಐಶ್ವರ್ಯಾ ರೈ ಬಚ್ಚನ್, ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಉಪಸ್ಥಿತರಿದ್ದರು.
ನಟ ಅಭಿಷೇಕ್ ಬಚ್ಚನ್ ನೇತೃತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಕ್ಕೆ ಹುರಿದುಂಬಿಸುವ ಸಲುವಾಗಿ ಇವರೆಲ್ಲರೂ ಆಗಮಿಸಿದ್ದರು. ಈಗಾಗಲೇ ಹಾಲಿ ಚಾಂಪಿಯನ್ ಆಗಿದ್ದ ಈ ತಂಡ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಸೀಸನ್ 10ರ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಸೋಲಿಸಿತು. ಸ್ಟಾರ್ ಸ್ಪೋರ್ಟ್ಸ್ ಐಶ್ವರ್ಯಾ ರೈ, ಅಮಿತಾಭ್ ಬಚ್ಚನ್ ಮತ್ತು ಆರಾಧ್ಯ ಅವರ ಉತ್ಸಾಹಭರಿತ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಬಚ್ಚನ್ ಫ್ಯಾಮಿಲಿ ಮೆಂಬರ್ಸ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಶರ್ಟ್ಸ್ ಧರಿಸಿ ಬಂದಿದ್ದರು. ಯು ಮುಂಬಾ ತಂಡದ ವಿರುದ್ಧ ಜೈಪುರ್ ಪಿಂಕ್ ಪ್ಯಾಂಥರ್ಸ್ ತೀವ್ರ ಪೈಪೋಟಿ ನಡೆಸಿತ್ತು. ಯು ಮುಂಬಾ ತಂಡವನ್ನು ಸೋಲಿಸುತ್ತಿದ್ದಂತೆ, ಬಚ್ಚನ್ ಫ್ಯಾಮಿಲಿ ಎದ್ದು ಚಪ್ಪಾಳೆ ತಟ್ಟುವುದನ್ನು ವೈರಲ್ ವಿಡಿಯೋಗಳಲ್ಲಿ ಕಾಣಬಹುದು. ಅಭಿಷೇಕ್ ಬಚ್ಚನ್ ಮತ್ತು ಬಂಟಿ ವಾಲಿಯಾ ಅವರು ಜೈಪುರ ಪಿಂಕ್ ಪ್ಯಾಂಥರ್ಸ್‌ನ ಮಾಲೀಕರು. ಈ ತಂಡ 2014ರಿಂದ, ಪ್ರೊ ಕಬಡ್ಡಿ ಲೀಗ್‌ನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿತು. ನಿನ್ನೆಯ ಮ್ಯಾಚ್ನಲ್ಲಿ ಯು ಮುಂಬಾ ತಂಡವನ್ನು ಮಣಿಸಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಗೆಲುವಿನ ನಗೆ ಬೀರಿತು.