ಬಾಲಿವುಡ್ನ ಮೋಹಕ ತಾರೆ ಐಶ್ವರ್ಯಾ ರೈ ಬಚ್ಚನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 49ನೇ ವರ್ಷಕ್ಕೆ ಕಾಲಿಟ್ಟರೂ ಇನ್ನೂ ಚಿರಯವ್ವನೆಯಂತೆ ಸಿನಿಕ್ಷೇತ್ರದಲ್ಲಿ ಇಂದಿಗೂ ಬೇಡಿಕೆ ಉಳಿಸಿಕೊಂಡಿರುವ ನಟಿ ಈಕೆ. ಮಂಗಳೂರಿನ ಚೆಲುವೆಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಮಾಡೆಲಿಂಗ್ ಕ್ಷೇತ್ರದಿಂದ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದ ಐಶ್ವರ್ಯಾ ರೈ ಅವರಿಗೆ ವಿಶ್ವಸುಂದರಿ ಕಿರೀಟ ದೊರೆತ ಕ್ಷಣದಿಂದ ಅವರ ಅದೃಷ್ಠದ ಬಾಗಿಲು ತೆರೆದುಕೊಂಡಿತ್ತು. ಸಾಲು ಸಾಲು ಸಿನಿಮಾಗಳ ಆಫರ್ಗಳು ಬರಲಾರಂಭಿಸಿದ್ದವು. ಜಾಗತಿಕ ತಾರೆ 1994ರಲ್ಲಿ ವಿಶ್ವಸುಂದರಿ ಕಿರೀಟ ತೊಟ್ಟ ಭಾರತದ ಎರಡನೇ ಮಹಿಳೆ. ಇದಕ್ಕಿಂತ ಮೊದಲು 1966 ರಲ್ಲಿ ರೀಟಾ ಫರಿಯಾ ಅವರಿಗೆ ಈ ಕಿರೀಟ ದೊರೆತಿದ್ದು, ವಿಶ್ವಸುಂದರಿ ಪಟ್ಟ ತೊಟ್ಟ ಭಾರತದ ಮೊದಲ ಮಹಿಳೆಯಾಗಿದ್ದರು.
ಆರಂಭದಲ್ಲಿ ತಮಗೆ ಬರುತ್ತಿದ್ದ ಸಿನಿಮಾ ಆಫರ್ಗಳಿಗೆಲ್ಲ ಒಕೆ ಎಂದು ಹೇಳದೇ ನಿರ್ದೇಶಕ ಮಣಿರತ್ನಂ ನಿರ್ದೇಶನದ 'ಇರುವರ್' ತಮಿಳು ಸಿನಿಮಾದ ಮೂಲಕ ಅಭಿನಯ ಲೋಕಕ್ಕೆ ಕಾಲಿಟ್ಟರು. ನಂತರ 'ಔರ್ ಪ್ಯಾರ್ ಹೋ ಗಯಾ' ಸಿನಿಮಾ ಮೂಲಕ ಬಾಲಿವುಡ್ನಲ್ಲಿ ಖಾತೆ ತೆರೆದರು. ನಂತರದಲ್ಲಿ ತಮಿಳು, ಹಿಂದಿ, ಬೆಂಗಾಲಿ, ಇಂಗ್ಲಿಷ್ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. 2002 ರಲ್ಲಿ, ಸಂಜಯ್ ಲೀಲಾ ಬನ್ಸಾಲಿಯವರ 'ದೇವದಾಸ್' ಚಿತ್ರದ ವಿಶ್ವ ಪ್ರಥಮ ಪ್ರದರ್ಶನಕ್ಕಾಗಿ ಐಶ್ವರ್ಯಾ ರೈ ಕ್ಯಾನೆಸ್ ಪ್ರವೇಶಿಸಿದರು.