'ಆಸ್ಕರ್' ಪ್ರಪಂಚದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾಗಿದೆ. ಸಿನಿಮಾ ಮತ್ತು ಸಾಕ್ಷ್ಯಚಿತ್ರಗಳಿಗೆ ಜಾಗತಿಕ ಮಟ್ಟದಲ್ಲಿ ದೊರೆಯುವ ಅತ್ಯುನ್ನತ ಮನ್ನಣೆ ಎಂದು ಪರಿಗಣಿಸಲಾಗಿರುವ ಆಸ್ಕರ್ ಪ್ರಶಸ್ತಿಯನ್ನು 'ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್' ನೀಡುತ್ತದೆ. ಈ ಸಂಸ್ಥೆಯು 1929 ರಿಂದ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಿದ್ದು, ಈಗಾಗಲೇ ಐವರು ಭಾರತೀಯರು ಈ ಅವಾರ್ಡ್ ಅನ್ನು ಗಿಟ್ಟಿಸಿಕೊಂಡಿದ್ದಾರೆ. ಅವರ ಬಗ್ಗೆ ತಿಳಿಯೋಣ ಬನ್ನಿ.
ಭಾನು ಅಥೈಯಾ: ಭಾರತಕ್ಕೆ ಮೊದಲ ಆಸ್ಕರ್ ಪ್ರಶಸ್ತಿಯನ್ನು ತಂದುಕೊಟ್ಟವರು ಭಾನು ಅಥೈಯಾ. 1983 ರಲ್ಲಿ 'ಗಾಂಧಿ' ಚಿತ್ರದಲ್ಲಿನ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡರು. ಜೊತೆಗೆ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ BAFTA ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಅವರು ಭಾರತೀಯ ಚಲನಚಿತ್ರ ನಿರ್ಮಾಪಕರೊಂದಿಗೆ ಸುಮಾರು 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಮೂಲತಃ ಮಹಾರಾಷ್ಟ್ರದವರಾದ ಭಾನು, 1929 ರ ಏಪ್ರಿಲ್ 28 ರಂದು ಜನಿಸಿದರು. ತಮ್ಮ 91 ನೇ ವಯಸ್ಸಿನಲ್ಲಿ 2020 ರ ಅಕ್ಟೋಬರ್ 15 ದೈವಾಧೀನರಾದರು.
ಸತ್ಯಜಿತ್ ರೇ: ಭಾರತದ ಅತ್ಯಂತ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಲ್ಲಿ ಸತ್ಯಜಿತ್ ರೇ ಒಬ್ಬರು. ಸಿನಿಮಾದಲ್ಲಿನ ಜೀವಮಾನದ ಸಾಧನೆಗಾಗಿ ಅವರು 1992 ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡರು. 1955 ರಲ್ಲಿ ಪಥೇರ್ ಪಾಂಚಾಲಿ ಎಂಬ ಸಿನಿಮಾವನ್ನು ನಿರ್ದೇಶಿಸುವ ಮೂಲಕ ರೇ ಸಿನಿ ಲೋಕಕ್ಕೆ ಕಾಲಿಟ್ಟರು. ಇದು ಅವರ ಮೊದಲ ಸಿನಿಮಾವಾಗಿದ್ದು, 11 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಭಾರತ ರತ್ನ ಪ್ರಶಸ್ತಿ, ಜೊತೆಗೆ ಹಲವಾರು ಪ್ರತಿಷ್ಠಿತ ಅವಾರ್ಡ್ಗಳನ್ನು ಪಡೆದುಕೊಂಡಿದ್ದ ಅವರು 1992 ರ ಏಪ್ರಿಲ್ 23 ರಂದು ಇಹಲೋಕ ತ್ಯಜಿಸಿದರು.
ಇದನ್ನೂ ಓದಿ:ದೀಪಿಕಾ ಪಡುಕೋಣೆ ಹೊಗಳಿದ ವಿವೇಕ್ ಅಗ್ನಿಹೋತ್ರಿ: ಶುರುವಾಯ್ತು 'ಡಬಲ್ ಸ್ಟ್ಯಾಂಡರ್ಡ್' ಚರ್ಚೆ!
ಎ.ಆರ್ ರೆಹಮಾನ್: 'ಸ್ಲಮ್ಡಾಗ್ ಮಿಲಿಯೇನರ್' ಚಿತ್ರದಲ್ಲಿನ 'ಜೈ ಹೋ' ಗೀತೆ ಸಂಯೋಜಕ ಎ.ಆರ್ ರೆಹಮಾನ್ ಅವರು 2009 ರಲ್ಲಿ ಬೆಸ್ಟ್ ಒರಿಜಿನಲ್ ಸ್ಕೋರ್ ಮತ್ತು ಬೆಸ್ಟ್ ಒರಿಜಿನಲ್ ಸಾಂಗ್ಗಾಗಿ ಆಸ್ಕರ್ ಪ್ರಶಸ್ತಿ ಪಡೆದರು. ಒಂದೇ ವರ್ಷದಲ್ಲಿ ಎರಡು ಆಸ್ಕರ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು ತಮಿಳು, ತೆಲುಗು, ಹಿಂದಿ ಸಿನಿಮಾಗಳಿಗೆ ಸಂಗೀತ ಸಂಯೋಜನೆ, ನಿರ್ದೇಶನದ ಜೊತೆಗೆ ಸಂಗೀತ ಸಾಹಿತ್ಯ ಕೂಡ ಬರೆದು ಸೈ ಎನಿಸಿಕೊಂಡಿದ್ದಾರೆ. ರೆಹಮಾನ್ ಅವರಿಗೆ ಫಿಲ್ಮ್ಫೇರ್, ಆರು ರಾಷ್ಟ್ರೀಯ, ಎರಡು ಅಕಾಡೆಮಿ, ಒಂದು ಗೋಲ್ಡನ್ ಗ್ಲೋಬ್ ಮತ್ತು ಎರಡು ಗ್ರ್ಯಾಮಿ ಪ್ರಶಸ್ತಿಗಳು ಸಂದಿವೆ. ಜೊತೆಗೆ 2000 ದಲ್ಲಿ ಪದ್ಮಶ್ರೀ ಮತ್ತು 2010 ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ.
ಗುಲ್ಜಾರ್: 'ಸ್ಲಮ್ಡಾಗ್ ಮಿಲಿಯೇನರ್' ಚಿತ್ರದ ಅತ್ಯುತ್ತಮ ಮೂಲ ಗೀತೆಗಾಗಿ (ಜೈ ಹೋ) 2009 ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದರು. ಎ.ಆರ್ ರೆಹಮಾನ್ ಜೊತೆ ಪ್ರಶಸ್ತಿಯನ್ನು ಹಂಚಿಕೊಂಡರು. ಇವರು ಕವಿಯಾಗಿ, ಚಿತ್ರ ನಿರ್ದೇಶಕರಾಗಿ, ಗೀತೆ ರಚನೆಕಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಇವರು ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ.
ರೆಸುಲ್ ಪೂಕುಟ್ಟಿ: 'ಸ್ಲಮ್ಡಾಗ್ ಮಿಲಿಯೇನರ್' ಚಿತ್ರದಲ್ಲಿ ಅತ್ಯುತ್ತಮ ಧ್ವನಿ ಮಿಶ್ರಣಕ್ಕಾಗಿ 2009 ರಲ್ಲಿ ರೆಸುಲ್ ಪೂಕುಟ್ಟಿ ಅವರು ಆಸ್ಕರ್ ಪ್ರಶಸ್ತಿ ಪಡೆದರು. ರಿಚರ್ಡ್ ಪ್ರೈಕ್ ಮತ್ತು ಇಯಾನ್ ಟ್ಯಾಪ್ ಅವರೊಂದಿಗೆ ಈ ಪ್ರಶಸ್ತಿಯನ್ನು ಹಂಚಿಕೊಂಡರು. ಇತ್ತೀಚೆಗೆ 2020 ರಲ್ಲಿ ತಾಷ್ಕೆಂಟ್ ಫೈಲ್ಸ್ ಚಿತ್ರಕ್ಕಾಗಿ ಅತ್ಯುತ್ತಮ ಆಡಿಯೋಗ್ರಾಫಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ರೆಸುಲ್ ಗೆದ್ದಿದ್ದಾರೆ.
ಈ ಬಾರಿಯ ಆಸ್ಕರ್ ಪ್ರಶಸ್ತಿ (95 ನೇ ಅಕಾಡೆಮಿ ಪ್ರಶಸ್ತಿ) ಪ್ರದಾನ ಸಮಾರಂಭವು ಮಾರ್ಚ್ 13 ರಂದು ನಡೆಯಲಿದೆ. 'ಆರ್ಆರ್ಆರ್ ' ಚಿತ್ರದ 'ನಾಟು ನಾಟು' ಹಾಡು, 'ಆಲ್ ದಟ್ ಬ್ರೀಥ್ಸ್', 'ದಿ ಎಲಿಫೆಂಟ್ ವಿಸ್ಪರ್ಸ್' ಇವು ಈ ಬಾರಿ ನಾಮನಿರ್ದೇಶಿತಗೊಂಡ ಚಲನಚಿತ್ರವಾಗಿದೆ.
ಇದನ್ನೂ ಓದಿ:ಊ ಅಂಟಾವಾ ಹಾಡಿಗೆ ಅಲ್ಲು ಅರ್ಜುನ್ ಸ್ಟೆಪ್ಸ್: ಹುಚ್ಚೆದ್ದು ಕುಣಿದ ಅಭಿಮಾನಿಗಳು