ಕರ್ನಾಟಕ ಚುನಾವಣೆ ಹಾಗೂ ಐಪಿಎಲ್ ಅಬ್ಬರದಿಂದ ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿಲ್ಲ. ಸದ್ಯ ವಿಧಾನಸಭೆ ಚುನಾವಣೆ ಮುಗಿದಿದ್ದು, ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸದ್ಯ ರಿಲೀಸ್ಗೆ ರೆಡಿ ಆಗಿರುವ ಬಿಗ್ ಸ್ಟಾರ್ ಸಿನಿಮಾಗಳಲ್ಲಿ ಧ್ರುವ ಸರ್ಜಾ ನಟನೆಯ ಮಾರ್ಟಿನ್, ಶಿವರಾಜ್ ಕುಮಾರ್ ಘೋಸ್ಟ್ ಹಾಗು ಉಪೇಂದ್ರ ಅಭಿನಯದ ಯುಐ ಚಿತ್ರಗಳು ಬಿಡುಗಡೆ ಹಂತದಲ್ಲಿವೆ.
ಈ ಮೂರು ಬಿಗ್ ಬಜೆಟ್ ಸಿನಿಮಾಗಲ್ಲಿ ರಿಲೀಸ್ಗೆ ಸಜ್ಜಾಗಿರೋ ಹೈ ವೋಲ್ಟೆಜ್ಸ್ ಚಿತ್ರ ಮಾರ್ಟಿನ್. ಫೆಬ್ರವರಿ ತಿಂಗಳಲ್ಲಿ ಈ ಚಿತ್ರದ ಟೀಸರ್ ರಿಲೀಸ್ ಮಾಡಿ ಚಿತ್ರತಂಡ ಗಮನ ಸೆಳೆದಿತ್ತು. ಆ್ಯಕ್ಷನ್ ಪ್ರಿನ್ಸ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಎ.ಪಿ ಅರ್ಜುನ್ ನಿರ್ದೇಶನದ ಈ ಚಿತ್ರಕ್ಕೆ ಉದಯ್ ಕೆ ಮೆಹ್ತಾ ಬಂಡವಾಳ ಹೂಡಿದ್ದಾರೆ. ಈ ಹೈವೋಲ್ಟೇಜ್ ಆ್ಯಕ್ಷನ್ ಎಂಟರ್ಟೈನರ್ ಚಿತ್ರಕ್ಕೆ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ.
ಆ್ಯಕ್ಷನ್ ಪ್ಯಾಕ್ಡ್ ಟೀಸರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ. ಧ್ರುವ ಸಿಕ್ಕಾಪಟ್ಟೆ ಖಡಕ್ ರೋಲ್ನಲ್ಲಿ ಮಿಂಚಿದ್ದಾರೆ. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ತಡವಾಗುತ್ತಿದೆ. ಚುನಾವಣೆ ನಂತರ ಸಿನಿಮಾ ರಿಲೀಸ್ ಬಗ್ಗೆ ಪ್ಲ್ಯಾನ್ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಮಾರ್ಟಿನ್ ಟೀಸರ್ ಡಿಲಿಟ್ ಆದಾಗ ರಷ್ಯಾ ಹ್ಯಾಕರ್ಸ್ಗಳದ್ದೇ ಕೈವಾಡ ಇದೆ ಅಂತಾ ಹೇಳಲಾಗಿತ್ತು.
ಇನ್ನು ಧ್ರುವ ಸರ್ಜಾ ಜೊತೆ ವೈಭವಿ ಶಾಂಡಿಲ್ಯ ರೊಮ್ಯಾನ್ಸ್ ಮಾಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಉದಯ್ ಮೆಹ್ತಾ ಈಟಿವಿ ಭಾರತ್ ಜೊತೆ ಮಾತನಾಡಿ, ಮಾರ್ಟಿನ್ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ, ಸಿನಿಮಾ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. 4 ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯ ಧ್ರುವ ಸರ್ಜಾ 'ಕೆಡಿ' ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. 15 ದಿನಗಳಲ್ಲಿ ಆ ಶೂಟಿಂಗ್ ಮುಗಿಸಿ ಬರ್ತಾರೆ.