ಹೈದರಾಬಾದ್: ತಾರೆಯರಾದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಮತ್ತು ಕಾಜೋಲ್ ಬಳಿಕ ಇದೀಗ ನಟಿ ಆಲಿಯಾ ಭಟ್ ಅವರ ಡೀಪ್‌ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಲಿಯಾ ಭಟ್ ಅವರ ಮುಖವನ್ನು ಇನ್ನೊಬ್ಬ ಮಹಿಳೆಯ ಮುಖಕ್ಕೆ ಎಡಿಟ್ ಮಾಡಲಾಗಿದ್ದು ಸದ್ಯ ಜಾಲತಾಣದಲ್ಲಿ ಜಾಗ ಪಡೆದಿದೆ. ಆದರೆ, ಈ ಬಗ್ಗೆ ನಟಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ಬೇರೆ ಯಾರದ್ದೋ ಮಹಿಳೆಯ ದೇಹಕ್ಕೆ ಆಲಿಯಾ ಭಟ್ ಅವರ ಮುಖವನ್ನು ಎಡಿಟ್ ಮಾಡಿ ಜಾಲತಾಣದಲ್ಲಿ ಹರಿಬಿಡಲಾಗಿದೆ. ಆಲಿಯಾ ಭಟ್ ಹೋಲುವ ಮಹಿಳೆಯು ಕ್ಯಾಮರಾದ ಮುಂದೆ ಅಶ್ಲೀಲ ಸನ್ನೆಗಳನ್ನು ಪ್ರದರ್ಶಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹೂವಿನ ನೀಲಿ ಹೊದಿಕೆಯ ಉಡುಪಿನಲ್ಲಿ ಮಾರ್ಫ್ಡ್ ಮಾಡಿರುವ ವಿಡಿಯೋ ಇದಾಗಿದ್ದು, ಕ್ಯಾಮರಾ ಕಡೆಗೆ ಅನುಚಿತವಾದ ಸನ್ನೆಗಳನ್ನು ಮಾಡುವುದು ಕಾಣಬಹುದು. ಆದರೆ, ಬುದ್ಧಿವಂತ ನೆಟಿಜನ್‌ಗಳು ಇದು ಆಲಿಯಾ ಭಟ್ ಅಲ್ಲ ಎಂದು ವಿಡಿಯೋ ಕೆಳಗೆ ಕಾಮೆಂಟ್ ಮಾಡುತ್ತಿದ್ದಾರೆ. ಇದು ಕೃತಕ ಬುದ್ಧಿಮತ್ತೆ (AI) ಯಿಂದ ತಯಾರಿಸಿದ ವಿಡಿಯೋ. ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಇಷ್ಟಕ್ಕೆ ನಿಲ್ಲಬೇಕೆಂದು ಹಲವರು ಮನವಿ ಸಹ ಮಾಡಿಕೊಂಡಿದ್ದಾರೆ.
ತಂತ್ರಜ್ಞಾನ ದುರ್ಬಳಕೆಯಿಂದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಭಾರಿ ವೈರಲ್ ಆಗಿತ್ತು. ಆ ಬಳಿಕ ಅದು ಕತ್ರಿನಾ ಕೈಫ್, ಕಾಜೋಲ್ ಸೇರಿ ಹಲವರನ್ನು ಸುತ್ತುವರೆದಿತ್ತು. ಇದೀಗ ಆಲಿಯಾ ಭಟ್‌ಗೂ ಅಂತಹದ್ದೆ ಕಂಟಕ ಎದುರಾಗಿದೆ. ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ದುರುಪಯೋಗದ ಬೇಸರ ವ್ಯಕ್ತಪಡಿಸಿರುವ ಭಾರತೀಯ ಸೆಲೆಬ್ರಿಟಿಗಳು ನಕಲಿ ವಿಡಿಯೋ ಮೂಲಕ ಮತ್ತೊಬ್ಬರ ಚಾರಿತ್ರ್ಯವಧೆ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ರಶ್ಮಿಕಾ ಡೀಪ್‌ಫೇಕ್ ವಿಡಿಯೋ ವೈರಲ್ ಆದಾಗ ಅಮಿತಾಭ್ ಬಚ್ಚನ್ ಸೇರಿದಂತೆ ಹಲವರು ಕಲಾವಿದರು ರಶ್ಮಿಕಾ ಪರ ಧ್ವನಿಯೆತ್ತಿದ್ದರು. ಅಲ್ಲದೇ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕೆಂದು ಮನವಿ ಮಾಡಿದ್ದರು. ಆದರೂ ಕೆಲವು ಕಿಡಿಗೇಡಿಗಳು ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ ಅನ್ನೋದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
ಡೀಪ್‌ಫೇಕ್ ವಿಡಿಯೋ ಬಗ್ಗೆ ಈ ತಿಂಗಳ ಆರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಕೂಡ ಮಾತನಾಡಿದ್ದರು. ಕೃತಕ ಬುದ್ಧಿಮತ್ತೆ ಡೀಪ್‌ಫೇಕ್‌ನ ಋಣಾತ್ಮಕ ಪರಿಣಾಮಗಳ ಬಗ್ಗೆ ಜಗತ್ತಿಗೆ ಆತಂಕವಿದೆ. ಬಗ್ಗೆ ಜಗತ್ತು ಒಟ್ಟಾರೆಯಾಗಿ ಕಾಳಜಿ ವಹಿಸಬೇಕು. ಅದರ ಮೇಲೆ ಜಾಗತಿಕ ನಿಯಂತ್ರಣಗಳನ್ನು ಹೇರಲು ಏಕೀಕೃತ ಪ್ರಯತ್ನ ಮಾಡಬೇಕಿದೆ ಎಂದಿದ್ದರು. ಅಲ್ಲದೇ ಕೃತಕ ಬುದ್ಧಿಮತ್ತೆಯ ಯುಗದಲ್ಲಿ, ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವುದು ಬಹಳ ಮುಖ್ಯ ಕೂಡ ಎಂದು ಅವರು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ:ಕೃತಕ ಬುದ್ಧಿಮತ್ತೆಯ ಡೀಪ್‌ಫೇಕ್ ಋಣಾತ್ಮಕ ಪರಿಣಾಮಗಳ ಬಗ್ಗೆ ಇಡೀ ಜಗತ್ತಿಗೆ ಆತಂಕವಿದೆ: ಮೋದಿ