ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರ ಜಾಗತಿಕ ಮಟ್ಟದಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ತೆರೆಕಂಡು 3 ವಾರ ಕಳೆದರೂ ಹಲವೆಡೆ ಉತ್ತಮ ಪ್ರದರ್ಶನ ಮುಂದುವರೆಸಿದೆ. ಬಹುದಿನಗಳ ಬಳಿಕ ತೆರೆ ಮೇಲೆ ಬಂದ 'ತಲೈವಾ'ನ ಹೊಸ ಅವತಾರ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. 'ಜೈಲರ್' ಸಕ್ಸಸ್ ಸೆಲೆಬ್ರೇಟ್ ಮಾಡುತ್ತಿರುವ ನಿರ್ಮಾಪಕ ಕಲಾನಿಧಿ ಮಾರನ್ ರಜನಿಕಾಂತ್‌ಗೆ ಉಡುಗೊರೆ ಮೇಲೆ ಉಡುಗೊರೆ ನೀಡುತ್ತಿದ್ದಾರೆ.
ರಜನಿಕಾಂತ್‌ಗೆ BMW X7 ಗಿಫ್ಟ್: ಇಂದು ಕಲಾನಿಧಿ ಮಾರನ್ ಅವರು ರಜನಿಕಾಂತ್ ಅವರನ್ನು ಭೇಟಿಯಾಗಿರುವ ಫೋಟೋ ಮತ್ತು ವಿಡಿಯೋವನ್ನು 'ಜೈಲರ್' ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ಹಂಚಿಕೊಂಡಿದೆ. ಮೆಚ್ಚುಗೆ ಮತ್ತು ಕೃತಜ್ಞತೆಯ ಸೂಚಕವಾಗಿ ಕಲಾನಿಧಿ ಮಾರನ್ ಅವರು ರಜನಿಕಾಂತ್ ಅವರಿಗೆ ಹೊಚ್ಚ ಹೊಸ BMW X7 ಕಾರು ಉಡುಗೊರೆಯಾಗಿ ನೀಡಿದ್ದಾರೆ. ಈ ಐಷಾರಾಮಿ ಕಾರನ್ನು ನಿರ್ಮಾಪಕರು ಗಿಫ್ಟ್ ಆಗಿ ತಲೈವಾಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ:ರಜನಿಕಾಂತ್ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿನಿಮಾ ನಟ: ಎಷ್ಟು ಕೋಟಿ ಗೊತ್ತೇ?
'ಜೈಲರ್' 23ನೇ ದಿನದ ಕಲೆಕ್ಷನ್: ರಜನಿಕಾಂತ್ ಅವರ ಜೈಲರ್ ಸಿನಿಮಾ ಆಗಸ್ಟ್ 10ರಂದು ಬಿಡುಗಡೆಯಾಗಿದ್ದು, ಯಶಸ್ವಿಯಾಗಿ ನಾಲ್ಕನೇ ವಾರ ಪ್ರವೇಶಿಸಿದೆ. ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಶುಕ್ರವಾರ ಚಿತ್ರವು ಭಾರತದಲ್ಲಿ 1.05 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ದಿನಕ್ಕೆ ಹೋಲಿಸಿದರೆ, 1.38 ಕೋಟಿ ರೂ. ಇಳಿಕೆಯಾಗಿದೆ. ಒಟ್ಟಾರೆಯಾಗಿ ಜೈಲರ್ ಬಿಡುಗಡೆಯಾದ 22 ದಿನಗಳಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 328 ಕೋಟಿ ರೂ.ಗೂ ಅಧಿಕ ಹಣ ಗಳಿಸಿದೆ. ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಸುಮಾರು 650 ಕೋಟಿ ರೂ. ಬಾಚಿಕೊಂಡಿದೆ.
2023ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ:ಜೈಲರ್ 2023ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ಆಕ್ಷನ್ ಕಾಮಿಡಿ ಸಿನಿಮಾ ತಮಿಳುನಾಡು ಮಾತ್ರವಲ್ಲದೇ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಸೇರಿದಂತೆ ಭಾರತದಾದ್ಯಂತ ಸಖತ್ ಸದ್ದು ಮಾಡುತ್ತಿದೆ. ಈ ಹಿಂದಿನ ಸಿನಿಮಾದಲ್ಲಿ ಹಿನ್ನಡೆ ಕಂಡಿದ್ದ ನೆಲ್ಸನ್ ದಿಲೀಪ್ ಕುಮಾರ್ ಅವರಿಗೆ ಜೈಲರ್ ಯಶಸ್ಸು ಮುಂದಿನ ಹೆಜ್ಜೆಗೆ ಉತ್ಸಾಹ ತುಂಬಿದೆ.
ಜೈಲರ್ ಚಿತ್ರತಂಡ..: ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ ಚಿತ್ರದಲ್ಲಿ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು ಚಿತ್ರವು ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಜನಿಕಾಂತ್ ಅವರ ಪತ್ನಿಯಾಗಿ ರಮ್ಯಾ ಕೃಷ್ಣ ನಟಿಸಿದ್ದು, ಮೋಹನ್ ಲಾಲ್, ಜಾಕಿ ಶ್ರಾಫ್, ಶಿವರಾಜ್ ಕುಮಾರ್, ತಮನ್ನಾ, ಸುನೀಲ್ ಮತ್ತು ಯೋಗಿಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಈ ಚಿತ್ರದ ವಿಶೇಷ ಆಕರ್ಷಣೆ.
ಇದನ್ನೂ ಓದಿ:RCB ಜೆರ್ಸಿ ಸೀನ್ ಕಟ್ ಮಾಡಿ: ಜೈಲರ್ ನಿರ್ಮಾಪಕರಿಗೆ ದೆಹಲಿ ಹೈಕೋರ್ಟ್ ಆದೇಶ!