ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಬಳಿಕ ನಟ ವರುಣ್ ಧವನ್ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಜವಾನ್ ನಿರ್ದೇಶಕರ ಜೊತೆ ಕೈಜೋಡಿಸಿರುವುದು ಗೊತ್ತಿರುವ ವಿಷಯ. ವರುಣ್ ಧವನ್ ಅವರು ಮುಂದಿನ ಆ್ಯಕ್ಷನ್ ಸಿನಿಮಾಗೆ ನಿರ್ದೇಶಕ ಅಟ್ಲೀ ಹಾಗೂ ಅವರ ಪತ್ನಿ ಪ್ರಿಯಾ ಮೋಹನ್ ಅವರ ಎ ಫಾರ್ ಆ್ಯಪಲ್ ಸ್ಟುಡಿಯೋಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಸಹಯೋಗವೂ ಇದೆ. ಇನ್ನೂ ಹೆಸರಿಡದ VD18 ಕ್ಕೆ 2019ರ ಕೀ ಸಿನಿಮಾ ಖ್ಯಾತಿಯ ಕಲೀಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ತಮಿಳಿನಲ್ಲಿ ಅಟ್ಲೀ ಆ್ಯಕ್ಷನ್ ಕಟ್ ಹೇಳಿದ್ದ ವಿಜಯ್, ಸಮಂತಾ ಹಾಗೂ ಆ್ಯಮಿ ಜಾಕ್ಸನ್ ಅಭಿನಯಿಸಿದ್ದ ತೆರಿ ಸಿನಿಮಾದ ರಿಮೇಕ್ ಇದು ಎಂದು ಹೇಳಲಾಗುತ್ತಿದ್ದು, ಈಗಾಗಲೇ ವರುಣ್ ಧವನ್ಗೆ ಜೋಡಿಯಾಗಿ ಕೀರ್ತಿ ಸುರೇಶ್ ಅಭಿನಯಿಸಲಿದ್ದಾರೆ. ಈ ಮೂಲಕ ಮಹಾನಟಿ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ಇದೀಗ ಕೀರ್ತಿ ಸುರೇಶ್ ನಂತರ ಎರಡನೇ ನಾಯಕಿಯಾಗಿ ಜುಬಿಲಿ ನಟಿ ವಾಮಿಕಾ ಗಬ್ಬಿ ಆಯ್ಕೆಯಾಗಿದ್ದಾರೆ. 2024ರ ಮೇ 31 ರಂದು ಸಿನಿಮಾ ಬಿಡುಗಡೆ ಮಾಡಲು ತಂಡ ನಿರ್ಧಾರ ಮಾಡಿದೆ.
ನಟಿ ವಾಮಿಕಾ ಅವರು ಸದ್ಯ ಉತ್ತಮ ಕಮರ್ಷಿಯಲ್ ಸಿನಿಮಾಗಾಗಿ ಎದುರು ನೋಡುತ್ತಿದ್ದು, ಅದೇ ಸಮಯಕ್ಕೆ ವರುಣ್ ಧವನ್ ಸಿನಿಮಾದಲ್ಲಿ ಅಭಿನಯಿಸಲು ಆಫರ್ ಬಂದಿರುವುದರಿಂದ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು 'ಈ ಪ್ರಾಜೆಕ್ಟ್ನ ಭಾಗವಾಗಲು ನಾನು ಥ್ರಿಲ್ ಆಗಿದ್ದೇನೆ. ನಾನು ಎದುರು ನೋಡುತ್ತಿದ್ದ ಹಾಗೆ ವರುಣ್ ಧವನ್ ಹಾಗೂ ಕೀರ್ತಿ ಸುರೇಶ್ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಪೂರ್ಣ ಕಮರ್ಷಿಯಲ್ ಸಿನಿಮಾ ಮಾಡಲು ಎದುರು ನೋಡುತ್ತಿದ್ದೆ. ಈಗ ಅಂತಹದೇ ಸಿನಿಮಾ ಸಿಕ್ಕಿದೆ. ಮುರಾದ್ ಸರ್ ಹಾಗೂ ಅಟ್ಲೀ ಅವರ ಜೊತೆಗೆ ಕೆಲಸ ಮಾಡಲು ನಾನು ಉತ್ಸುಕಳಾಗಿದ್ದೇನೆ' ಎಂದು ಹೇಳಿದ್ದಾರೆ.