ಹಾಲಿವುಡ್ ನಿರ್ದೇಶಕಿ ಗ್ರೆಟಾ ಗೆರ್ವಿಗ್ ನಿರ್ದೇಶನದ 'ಬಾರ್ಬಿ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜುಲೈ 21 ರಂದು (ಶುಕ್ರವಾರ) ವಿಶ್ವದಾದ್ಯಂತ ಓಪನ್‌ಹೈಮರ್ ಸಿನಿಮಾದೊಂದಿಗೆ ಬಿಡುಗಡೆಯಾಗಿ ಕಲೆಕ್ಷನ್ ವಿಚಾರದಲ್ಲಿ ವೇಗದ ಓಟ ಮುಂದುವರೆಸಿದೆ. ಇದೀಗ ಭಾರತೀಯ ಗಾಯಕಿ ಸೋನಾ ಮೊಹಾಪಾತ್ರ ಮತ್ತು ನಟಿ ಜೂಹಿ ಪರ್ಮಾರ್ ಚಲನಚಿತ್ರದ ಬಗ್ಗೆ ತಮ್ಮ ವ್ಯತಿರಿಕ್ತ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಥಿಯೇಟರ್‌ನಲ್ಲಿ ಬಾರ್ಬಿ ಸಿನಿಮಾ ವೀಕ್ಷಿಸಿದ ನಂತರ ಮೊಹಾಪಾತ್ರ ತಮ್ಮ ನಿರಾಶೆ ವ್ಯಕ್ತಪಡಿಸಲು ಸೋಷಿಯಲ್ ಮೀಡಿಯಾವನ್ನು ವೇದಿಕೆಯಾಗಿ ಬಳಸಿಕೊಂಡರು.
ಕೆನ್ ಆಗಿ ರಯಾನ್ ಗೊಸ್ಲಿಂಗ್ ಜೊತೆಗೆ ಮಾರ್ಗಾಟ್ ರಾಬಿ ನಾಯಕಿಯಾಗಿ ನಟಿಸಿರುವ ಈ ಚಿತ್ರವು ಅಂತಾರಾಷ್ಟ್ರೀಯ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಗಳಿಸಿದೆ. ಕ್ರಿಸ್ಟೋಫರ್ ನೋಲನ್ ಅವರ ಒಪೆನ್‌ಹೈಮರ್ ಅನ್ನು ಮೀರಿಸಿದೆ. ಬಾರ್ಬಿ ಭಾರತದಲ್ಲಿ ಕಡಿಮೆ ಕಲೆಕ್ಷನ್ ಮಾಡಿದರೂ, ವಿಶ್ವಾದ್ಯಂತ ಉತ್ತಮ ಗಳಿಕೆ ಕಂಡಿದೆ. ಅದಾಗ್ಯೂ, ಸೋನಾ ಮೊಹಾಪಾತ್ರ ಅವರು ಈ ಚಿತ್ರದಿಂದ ಅತೃಪ್ತರಾಗಿದ್ದಾರೆ. ಕಲೆಕ್ಷನ್ ವಿಚಾರದ ಹೊರತಾಗಿಯೂ ಅವರಿಗೆ ಈ ಸಿನಿಮಾ ನಿರಾಶೆ ಉಂಟು ಮಾಡಿದೆ.
ಸೋನಾ ಟ್ವಿಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, "ನಾನು ಹಲವು ವರ್ಷಗಳ ನಂತರ ಥಿಯೇಟರ್ಗೆ ಹೋಗಿದ್ದೇನೆ. ಅಸಹನೀಯ ಮತ್ತು ಭಯಾನಕ ಬಾರ್ಬಿಗೆ ಒಳಗಾಗಿದ್ದೇನೆ. ಚಿತ್ರದ ಮೂಲಕ ಜೋರಾಗಿ ಮಾತನಾಡುವ ದೇಸಿ ಬಾರ್ಬಿಗಳ ಗುಂಪೊಂದು ಹೆಚ್ಚುವರಿ ಚಿತ್ರಹಿಂಸೆಯಾಗಿದೆ." ಎಂದು ಹೇಳಿದ್ದಾರೆ. ಬಾರ್ಬಿ ಸಿನಿಮಾ ಭಯಾನಕ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಸೋನಾ ಅವರ ಈ ಪೋಸ್ಟ್ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.