ಮುಂಬೈ: ಬಾಲಿವುಡ್ನ ರೋಮ್ಯಾಂಟಿಕ್ ಜೋಡಿಗಳಲ್ಲಿ ಒಂದಾಗಿರುವ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚೆಗಷ್ಟೇ ಎರಡು ಕುಟುಂಬಸ್ಥಗಳ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ರಾಜಸ್ಥಾನದ ಜೈಸಲ್ಮೇರ್ನ ಸೂರ್ಯಗಢ ಕೋಟೆಯಲ್ಲಿ ನಡೆದ ಸಮಾರಂಭಕ್ಕೆ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇದೀಗ ಈ ಜೋಡಿ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಗೆ ಸಿದ್ಧರಾಗಿದ್ದಾರೆ. ಈ ಆರತಕ್ಷತೆ ಸಮಾರಂಭದಲ್ಲಿ ಬಾಲಿವುಡ್ ಮಂದಿ ಭಾಗಿಯಾಗಲಿದ್ದು, ಮತ್ತೊಂದು ಅದ್ಧೂರಿ ಕಾರ್ಯಕ್ರಮ ನಡೆಸಲು ಜೋಡಿ ಸಜ್ಜಾಗಿದೆ. ಸದ್ಯ ರಾಜಸ್ಥಾನದ ಸೂರ್ಯಗಢ್ ಅರಮನೆಯಲ್ಲಿ ನಡೆದ ಅದ್ಧೂರಿ ಮದುವೆ ಬಳಿಕ ಇದೀಗ ದೆಹಲಿಯಲ್ಲಿ ಸಿದ್ಧಾರ್ಥ್ ಮನೆಯಲ್ಲಿ ಈ ಜೋಡಿ ಹಲವು ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದಾರೆ.
ಮದುವೆ ಬಳಿಕ ಈ ಜೋಡಿ ಎರಡು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಫೆ 9ರಂದು ದೆಹಲಿಯಲ್ಲಿ ಸ್ನೇಹಿತರು, ಕುಟುಂಬಸ್ಥರಿಗೆ ದೆಹಲಿಯ ಲೀಲಾ ಪ್ಯಾಲೇಸ್ನಲ್ಲಿ ಫೆಬ್ರವರಿ 9ರಂದು ಆರತಕ್ಷತೆ ನಡೆಸಲಾಗಿತ್ತು. ಈಗ ಬಾಲಿವುಡ್ ಮಂದಿಗಾಗಿ ಎರಡನೇ ಆರತಕ್ಷತೆಯನ್ನು ಮುಂಬೈನ ಸೇಂಟ್ ರೆಜಿಸ್ ಹೋಟೆಲ್ನಲ್ಲಿ ಫೆ. 12ರಂದು(ಭಾನುವಾರ) ನಡೆಸಲು ಸಜ್ಜಾಗಿದ್ದಾರೆ. ದೆಹಲಿಯಲ್ಲಿ ಕುಟುಂಬಸ್ಥರಿಗಾಗಿ ನಡೆದ ಆರತಕ್ಷತೆಯಲ್ಲಿ ತುಂಬಾ ಸಿಂಪಲ್ ಲುಕ್ನಲ್ಲಿ ಕಿಯಾರಾ ಮತ್ತು ಸಿದ್ದಾರ್ಥ್ ಕಂಡು ಬಂದಿದ್ದಾರೆ ಎನ್ನಲಾಗಿದೆ. ಮುಂಬೈ ಆರತಕ್ಷತೆಯಲ್ಲಿ ಮತ್ತೆ ಅವರು ಮನೀಷ್ ಮಲ್ಹೋತ್ರಾ ವಸ್ತ್ರ ವಿನ್ಯಾಸದಲ್ಲಿ ಅದ್ದೂರಿಯಾಗಿ ಕಣ್ಸೆಳೆಯಬಹುದು ಎನ್ನಲಾಗಿದೆ. ಸಿದ್ದಾರ್ಥ್ ಮತ್ತು ಕಿಯಾರಾ ಶನಿವಾರ ದೆಹಲಿಯಿಂದ ಮುಂಬೈಗೆ ಆಗಮಿಸಲಿದ್ದಾರೆ.
ಮದುವೆಯಲ್ಲಿ ಸಾಕಷ್ಟು ಗೌಪ್ಯತೆ ಕಾಪಾಡಿದ ಈ ಜೋಡಿಯ ಆರತಕ್ಷತೆಯ ಆಹ್ವಾನ ಪತ್ರಿಕೆ ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ವೆಬ್ಲೊಯ್ಡ್ , ಸಿದ್ದಾರ್ಥ್ ಕಿಯಾರಾ ಅವರ ಮುಂಬೈ ಆರತಕ್ಷತೆಯ ಆಹ್ವಾನ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಕಾರ್ಡ್ನಲ್ಲಿ ಸಿದ್ದಾರ್ಥ್-ಕಿಯಾರಾ ನಗು ಮುಖದ ಫೋಟೋ ಕಾಣಬಹುದಾಗಿದ್ದು, ಜೊತೆಗೆ ಆರತಕ್ಷತೆ ನಡೆಯುವ ಸ್ಥಳ, ದಿನಾಂಕ ಮತ್ತು ಸಮಯ ದಾಖಲಾಗಿದೆ.