2022ರ ಟಾಲಿವುಡ್ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಸಿನಿಮಾದ 'ನಾಟು ನಾಟು'ಗೆ ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಬುಧವಾರ ಸಿನಿಮಾ ತಂಡವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ. ಬಾಲಿವುಡ್ ಗಾಯಕ ಅದ್ನಾನ್ ಸಮಿ ಅವರು ಜಗನ್ ಮೋಹನ್ ರೆಡ್ಡಿಯವರ 'ತೆಲುಗು ಧ್ವಜ' ಎಂಬ ಪದವನ್ನು ಬಳಸಿದ್ದಕ್ಕಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಜಗನ್ ರೆಡ್ಡಿ ಟ್ವೀಟ್ ಏನಾಗಿತ್ತು?: 'ತೆಲುಗು ಬಾವುಟವು ಎತ್ತರಕ್ಕೆ ಹಾರುತ್ತಿದೆ. ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ. ನಿಮ್ಮ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ.' ಎಂದು ರೆಡ್ಡಿ ಟ್ವೀಟಿಸಿದ್ದರು. ಈ ಟ್ವೀಟ್ ಟೀಕಿಸಿರುವ ಅದ್ನಾನ್ ಸಮಿ, ಮುಖ್ಯಮಂತ್ರಿಯವರ ಪದಗಳ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಅವರು ಭಾರತೀಯ ಧ್ವಜವನ್ನು ಬಳಸಬೇಕಿತ್ತು ಎಂದಿದ್ದಾರೆ. ಜಗನ್ ಪ್ರತ್ಯೇಕತಾವಾದಿ ಧೋರಣೆ ಹೊಂದಿದ್ದಾರೆ ಎಂದು ದೂರಿದ್ದಾರೆ.
ಅದ್ನಾನ್ ಸಮಿ ಅತೃಪ್ತಿ: 'ತೆಲುಗು ಧ್ವಜವೇ? ನಾವು ಮೊದಲು ಭಾರತೀಯರು. ದಯವಿಟ್ಟು ದೇಶದ ಇತರ ಭಾಗಗಳಿಂದ ನಿಮ್ಮನ್ನು ನೀವು ಬೇರ್ಪಡಿಸುವುದನ್ನು ನಿಲ್ಲಿಸಿ. ವಿಶೇಷವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ, ನಾವು ಒಂದೇ ದೇಶವಾಗಿದ್ದೇವೆ. 1947ರಲ್ಲಿ ನಾವು ಕಂಡಂತೆ ಈ 'ಪ್ರತ್ಯೇಕತಾವಾದಿ' ಧೋರಣೆ ಅತ್ಯಂತ ಅನಾರೋಗ್ಯಕರ. ಜೈ ಹಿಂದ್' ಎಂದು ತಮ್ಮ ಅದ್ನಾನ್ ಸಮಿ ಟ್ವೀಟ್ ಮಾಡಿದ್ದಾರೆ.