ಬಾಲಿವುಡ್ ಸೂಪರ್ ಸ್ಟಾರ್ ನಟರಾದ ಆದಿತ್ಯ ರಾಯ್ ಕಪೂರ್ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ವೆಬ್ಸೀರಿಸ್ ಬಿಡುಗಡೆಗೆ ಸಜ್ಜಾಗಿದೆ. 'ದಿ ನೈಟ್ ಮ್ಯಾನೇಜರ್' ಪಾರ್ಟ್-II ಥ್ರಿಲ್ಲರ್ ಸರಣಿಯಾಗಿದ್ದು ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಇದೀಗ ವೆಬ್ಸೀರಿಸ್ ತಯಾರಕರು ಟ್ರೇಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.
ಸರಣಿಯ ಟ್ರೇಲರ್ ಬಿಡುಗಡೆಯ ಮಾಹಿತಿ ನೀಡಲು ನಟ ಅನಿಲ್ ಕಪೂರ್ ಇನ್ಸ್ಟಾ ವೇದಿಕೆಯನ್ನು ಬಳಸಿಕೊಂಡರು. ಮೋಷನ್ ಪೋಸ್ಟರ್ ಹಂಚಿಕೊಂಡಿರುವ ಅವರು, "ರಾಜ ಮತ್ತು ಕಾವಲುಗಾರನ ಈ ಕಥೆಯು ಈಗ ಅಂತ್ಯಗೊಳ್ಳಲಿದೆ. #ಹಾಟ್ಸ್ಟಾರ್ಸ್ಪೆಷಲ್ #ದಿ ನೈಟ್ ಮ್ಯಾನೇಜರ್ ಪಾರ್ಟ್ 2 ಟ್ರೇಲರ್ ಇದೇ ಜೂನ್ 5 ರಂದು ಬಿಡುಗಡೆಯಾಗಲಿದೆ. ಜೂನ್ 30 ರಂದು ಡಿಸ್ನೀ ಹಾಟ್ಸ್ಟಾರ್ನಲ್ಲಿ ಮಾತ್ರ ಸ್ಟ್ರೀಮಿಂಗ್ ಆಗಲಿದೆ" ಎಂದು ಕ್ಯಾಪ್ಶನ್ ಬರೆದಿದ್ದಾರೆ.
'ದಿ ನೈಟ್ ಮ್ಯಾನೇಜರ್' ಎಂಬುದು ಬ್ರಿಟಿಷ್ ದೂರದರ್ಶನ ನಾಟಕ 'ದಿ ನೈಟ್ ಮ್ಯಾನೇಜರ್'ನ ಹಿಂದಿ ರಿಮೇಕ್ ಆಗಿದೆ. ಜೊತೆಗೆ ಇದು ಅದೇ ಹೆಸರಿನ 'ಜಾನ್ ಲೆ ಕ್ಯಾರೆ' ಅವರ ಕಾದಂಬರಿಯನ್ನು ಆಧರಿಸಿದೆ. ಸಂದೀಪ್ ಮೋದಿ ಅವರು ಹಿಂದಿ ವೆಬ್ ಸರಣಿಯನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಆದಿತ್ಯ ರಾಯ್ ಕಪೂರ್ ಅವರು ಮಾಜಿ ಗುಪ್ತಚರ ಅಧಿಕಾರಿಯಾಗಿ ಶಾನ್ ಸೇನ್‌ಗುಪ್ತಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅನಿಲ್ ಕಪೂರ್ ಅವರು ಶೈಲೇಂದ್ರ ರುಂಗ್ಟಾ ಎಂಬ ಪಾತ್ರದಲ್ಲಿ ನೆಗೆಟೀವ್ ರೋಲ್ ಮಾಡುತ್ತಿದ್ದಾರೆ. ಶೋಭಿತಾ ಧೂಳಿಪಾಲ, ತಿಲೋಟಮಾ ಶೋಮ್, ಶಾಶ್ವತ ಚಟರ್ಜಿ ಮತ್ತು ರವಿ ಬೆಹ್ಲ್ ಕೂಡ ಈ ವೆಬ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಹ್ಯಾಪಿ ಬರ್ತ್ಡೇ ಇಳಯರಾಜ - ಮಣಿರತ್ನಂ: ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಲೋಕದ ದಿಗ್ಗಜರು